ಕನ್ನಡಪ್ರಭ ವಾರ್ತೆ ಹಿರಿಯೂರು

ಭಗವಾನ್ ಬುದ್ಧರ ಶಾಂತಿ, ಕರುಣೆ ಹಾಗೂ ಅಹಿಂಸೆಯ ಸಂದೇಶವನ್ನು ಎಲ್ಲರೂ ಅರಿಯಬೇಕಾಗಿದೆ. ಆಗ ಮಾತ್ರ ಬದುಕು ಸುಂದರವಾಗಲಿದೆ ಎಂದು ಉಪ ತಹಸೀಲ್ದಾರ್ ಕೆಬಿ ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಭಗವಾನ್ ಬುದ್ಧರ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬುದ್ಧ ಪೂರ್ಣಿಮೆ ಕೇವಲ ಧಾರ್ಮಿಕ ಆಚರಣೆಯಲ್ಲದೆ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಅವಕಾಶವಾಗಿದೆ. ಇಂದಿನ ಜಗತ್ತಿಗೆ ಬುದ್ಧನ ಸಂದೇಶ ಅತ್ಯಂತ ಪ್ರಸ್ತುತವಾದುದು. ಒತ್ತಡ, ಲೋಭ, ಹಿಂಸೆಗಳು ಮಾನವನನ್ನು ಅಶಾಂತಿಯ ಕಡೆ ಕರೆದೊಯ್ಯುತ್ತಿವೆ. ಅಹಿಂಸೆ ಮತ್ತು ಕರುಣೆಯ ಜೀವನ ಸಾಗಿಸಿದರೆ ನಮ್ಮ ಬದುಕು ಸಹ ಜ್ಞಾನಮಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಶಿವಪ್ರಸಾದ್, ಶಿವಶಂಕರ್ ಸೀಗೆಹಟ್ಟಿ, ಕೃಷಿ ಇಲಾಖೆ ಅಧಿಕಾರಿ ಅಶೋಕ್, ಶಿಕ್ಷಣ ಇಲಾಖೆ ರವೀಂದ್ರ ನಾಯ್ಕ, ಅಬಕಾರಿ ಇಲಾಖೆ ಸತೀಶ್ ನಾಯ್ಕ, ತಾಪಂ ಎ.ಡಿ.ಶಿವಮೂರ್ತಿ, ಪಶು ವೈದ್ಯಕೀಯ ಇಲಾಖೆಯ ಡಾ.ಮಹಮದ್ ಹುಸೇನ್,ಚಂದ್ರಾನಾಯ್ಕ, ರಾಜು,ದೇವರಾಜ್, ಶ್ರೀನಿವಾಸ್ ರೆಡ್ಡಿ ಮುಂತಾದವರು ಹಾಜರಿದ್ದರು.