ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಜಿಲ್ಲೆಯಾದ್ಯಂತ ಗುರುವಾರ ಅನಿರೀಕ್ಷಿತ ದಾಳಿ ಹಾಗೂ ದಿಢೀರ್ ಪರಿಶೀಲನೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವ ಅಧಿಕಾರಿಗಳು, ಹೋಟೆಲ್ ಮಾಲೀಕರು ಮತ್ತು ಆಹಾರ ಉತ್ಪನ್ನಗಳ ತಯಾರಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಹಲವೆಡೆ ಅನಿರೀಕ್ಷಿತ ದಾಳಿ, ದಿಢೀರ್ ಪರಿಶೀಲನೆ । ಹೋಟೆಲ್ ಮಾಲೀಕರು ಹಾಗೂ ಆಹಾರ ಉತ್ಪನ್ನ ತಯಾರಕರಿಗೆ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಗದಗ

ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಜಿಲ್ಲೆಯಾದ್ಯಂತ ಗುರುವಾರ ಅನಿರೀಕ್ಷಿತ ದಾಳಿ ಹಾಗೂ ದಿಢೀರ್ ಪರಿಶೀಲನೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವ ಅಧಿಕಾರಿಗಳು, ಹೋಟೆಲ್ ಮಾಲೀಕರು ಮತ್ತು ಆಹಾರ ಉತ್ಪನ್ನಗಳ ತಯಾರಕರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಧಾನ್ಯ ಹಾಗೂ ಆಹಾರ ಉತ್ಪನ್ನಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಗದಗ ಜಿಲ್ಲೆಗೆ ಭೇಟಿ ನೀಡಿರುವ ಆಹಾರ ಆಯೋಗದ ಅಧ್ಯಕ್ಷ ಎಚ್. ಕೃಷ್ಣ ನೇತೃತ್ವದ ತಂಡ, ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸುವುದರ ಜತೆಗೆ ಆಹಾರ ಉತ್ಪನ್ನಗಳ ಗುಣಮಟ್ಟದ ಪರಿಶೀಲನೆ ನಡೆಸಿತು.

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಯಾಣಿ ಟ್ರೇಡಿಂಗ್ ಕಂಪನಿಯ ಚಿಲ್ಲಿ ಪೌಡರ್ ತಯಾರಿಕಾ ಘಟಕಕ್ಕೆ ಸಾರ್ವಜನಿಕರ ದೂರಿನ ಮೇರೆಗೆ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಘಟಕದಲ್ಲಿ ತಯಾರಿಸಲಾಗುತ್ತಿದ್ದ ವಿವಿಧ ಬಗೆಯ ಮೆಣಸಿನ ಪುಡಿಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ, ಪುಡಿಯಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಶಂಕೆ ವ್ಯಕ್ತವಾಯಿತು. ಕಳಪೆ ಗುಣಮಟ್ಟದ ಪುಡಿ ಕಂಡು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆ ನಾಲ್ಕೈದು ಬಗೆಯ ಚಿಲ್ಲಿ ಪೌಡರ್ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಯಿತು. ವರದಿ ಬರುವವರೆಗೆ ಘಟಕದ ಉತ್ಪಾದನೆ ಹಾಗೂ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಕಾರ್ಖಾನೆಯನ್ನು ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದರು.

ಅಲ್ಲದೆ, ಕಾರ್ಮಿಕರ ಸುರಕ್ಷತಾ ಕ್ರಮಗಳು, ಕಾರ್ಮಿಕರ ಆರೋಗ್ಯ ಪ್ರಮಾಣಪತ್ರ, ವೇತನ ಪಾವತಿ ವಿವರ, ಘಟಕದ ನವೀಕರಣ ದಾಖಲೆ ಹಾಗೂ ವಾರ್ಷಿಕ ವರದಿಯನ್ನು ಸಲ್ಲಿಸುವಂತೆ ಕಂಪನಿ ಆಡಳಿತ ಮಂಡಳಿಗೆ ಸೂಚನೆ ನೀಡಿದರು. ಪ್ರಯೋಗಾಲಯದ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ವಿವಿಧ ಇಲಾಖೆಗಳಿಗೂ ಭೇಟಿ, ಪರಿಶೀಲನೆ:

ಇದಾದ ಬಳಿಕ ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳು, ಆಹಾರ ಧಾನ್ಯಗಳ ಸಗಟು ಮಳಿಗೆಗಳು, ಅಂಗನವಾಡಿ ಕೇಂದ್ರಗಳು, ಎಂಎಸ್‌ಪಿಟಿಸಿ ಕೇಂದ್ರಗಳು, ಮಧ್ಯಾಹ್ನದ ಉಪಾಹಾರ ಯೋಜನೆ, ಆಸ್ಪತ್ರೆಗಳು, ಪೌಷ್ಟಿಕ ಪುನರ್ವಸತಿ ಕೇಂದ್ರ (ಎನ್‌ಆರ್‌ಸಿ), ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಸರ್ಕಾರದ ಆಹಾರ ಸಂಬಂಧಿತ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆಯೇ, ಆಹಾರ ಧಾನ್ಯಗಳ ಗುಣಮಟ್ಟ ಮತ್ತು ವಿತರಣೆಯಲ್ಲಿ ಯಾವುದೇ ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸುವುದು ಭೇಟಿಯ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು, ಉಪವಿಭಾಗಾಧಿಕಾರಿ ಗಂಗಪ್ಪ, ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ, ರೋಹಿಣಿ ಪ್ರಿಯಾ, ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.