ಅಪ್ಪು ಜನ್ಮದಿನ ಅಂಗವಾಗಿ ಅನ್ನದಾನ, ರಕ್ತದಾನ ಶಿಬಿರ

| Published : Mar 18 2025, 12:30 AM IST

ಸಾರಾಂಶ

ಚಲನಚಿತ್ರ ನಾಯಕ ನಟರಾಗುವ ಜೊತೆಗೆ, ಸಾವಿರಾರು ಮಂದಿಗೆ ಆರ್ಥಿಕ ನೆರವು ನೀಡುವ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದಾರೆ. ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ತಂದೆ ಡಾ.ರಾಜ್‌ಕುಮಾರ್ ಅವರಂತೆ ಸಮಾಜ ಸುಧಾರಣೆಯ ಸಂದೇಶವನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಸಮಿತಿ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಅನ್ನದಾನ, ರಕ್ತದಾನ ಶಿಬಿರ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಕ್ಷೀರಾಭಿಷೇಕ, ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಅತಿಥಿ ಗಣ್ಯರು ಪುನೀತ್ ಅವರ ಸ್ಮರಣೆ ಮಾಡಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಪ್ಪು ಕೇವಲ ಚಿತ್ರ ನಟರಾಗಿರಲಿಲ್ಲ. ಬದಲಾಗಿ ತೆರೆಯ ಹಿಂದಿನ ಸಮಾಜ ಸೇವಕರಾಗಿದ್ದರು ಎಂದರು.

ಚಲನಚಿತ್ರ ನಾಯಕ ನಟರಾಗುವ ಜೊತೆಗೆ, ಸಾವಿರಾರು ಮಂದಿಗೆ ಆರ್ಥಿಕ ನೆರವು ನೀಡುವ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದಾರೆ. ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ತಂದೆ ಡಾ.ರಾಜ್‌ಕುಮಾರ್ ಅವರಂತೆ ಸಮಾಜ ಸುಧಾರಣೆಯ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಶ್ರೇಷ್ಠ ಕೆಲಸ ಮಾಡಿದ್ದ ಅಪ್ಪುರಂತಹ ಮಹಾನ್ ಕಲಾವಿದನನ್ನು ಬೇಗ ಕಳೆದುಕೊಂಡು ಕನ್ನಡನಾಡು ಬಡವಾಗಿದೆ. ಇವರ ಆದರ್ಶ ಗುಣಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ ಎಂದು ತಿಳಿಸಿದರು.

ಪುನೀತ್ ಹುಟ್ಟುಹಬ್ಬದ ಅಂಗವಾಗಿ ಸುಮಾರು 75ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿರುವುದು ಶ್ಲಾಘನೀಯ. ರಕ್ತದಾನ ಪುಣ್ಯದ ಕೆಲಸವಾಗಿದೆ. ರಕ್ತದಾನವು ಅಪಘಾತದ ವೇಳೆ ಜೀವನ್ಮರಣ ಸಂದರ್ಭದಲ್ಲಿ ರಕ್ತವನ್ನು ನೀಡಿ ಸಾಯುವ ವ್ಯಕ್ತಿಯನ್ನು ಬದುಕಿಸಿದ ಪುಣ್ಯ ರಕ್ತದಾನ ಮಾಡಿದವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ವೇಳೆ ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲುರವಿ, ಗವೀಮಠದ ಪೀಠಾಧ್ಯಕ್ಷ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿ, ಶ್ರೀ ಭೂವರಹನಾಥ ಕ್ಷೇತ್ರದ ಟ್ರಸ್ಟಿ ಶ್ರೀನಿವಾಸ್ ರಾಘವನ್, ಸಹಾಯಕ ಬಸವರಾಜ್, ಸಾಧುಗೋನಹಳ್ಳಿ ಶ್ರೀ ಮಾತೃಭೂಮಿ ವೃದ್ಧಾಶ್ರಮದ ಮುಖ್ಯಸ್ಥ ನಾಗಣ್ಣ, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್ ಸೇರಿದಂತೆ ಸಾವಿರಾರು ಮಂದಿ ಇದ್ದರು. ಪುನೀತ್ ಹುಟ್ಟುದ ಅಂಗವಾಗಿ ಪ್ರವಾಸಿ ಮಂದಿರ ವೃತ್ತದಲ್ಲಿ ಅನ್ನಸಂತರ್ಪಣೆ ನಡೆಯಿತು.