ಮುಂಗಾರು ನಿರೀಕ್ಷೆಯಲ್ಲಿ ಅನ್ನದಾತರು

| Published : Jun 02 2024, 01:46 AM IST / Updated: Jun 02 2024, 11:03 AM IST

ಸಾರಾಂಶ

ಮುಂಗಾರು ಹಂಗಾಮಿನ ಬಿತ್ತನೆಗೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದ ರೈತ ಸಮೂಹಕ್ಕೆ ಮಳೆ ಸೂಚನೆ ಇಲ್ಲದೆ ಏನು ಮಾಡಬೇಕು ಎಂದು ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ

ಅಶೋಕ.ಡಿ.ಸೊರಟೂರ 

ಲಕ್ಷ್ಮೇಶ್ವರ : ಮುಂಗಾರು ಪೂರ್ವ ಮಳೆಯು ತಾಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಆಗದೆ ಇರುವುದರಿಂದ ರೈತರು ಬಿತ್ತನೆ ಮಾಡಿದ ಹೆಸರು, ಬಿಟಿ ಹತ್ತಿ ಹಾಗೂ ಗೋವಿನ ಜೋಳದ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿರುವ ದೃಶ್ಯ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಕಂಡು ಬರುತ್ತಿದೆ.

ಮುಂಗಾರು ಹಂಗಾಮಿನ ಮಳೆಯು ಉತ್ತಮವಾಗಿ ಆಗುವ ನಿರೀಕ್ಷೆಯಲ್ಲಿರುವ ರೈತ ಸಮೂಹಕ್ಕೆ ಬಿಸಿಲಿನ ಬೇಗೆ ಕೊಂಚವೂ ಕಡಿಮೆಯಾಗದೆ ಈ ಹಿಂದೆ ಬಿದ್ದ ಮಳೆಯ ತೇವಾಂಶವು ಕೂಡಾ ಆರಿ ಹೋಗುವ ಆತಂಕ ರೈತರಲ್ಲಿ ಮೂಡಿದೆ.

ಮುಂಗಾರು ಹಂಗಾಮಿನ ಬಿತ್ತನೆಗೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದ ರೈತ ಸಮೂಹಕ್ಕೆ ಮಳೆ ಸೂಚನೆ ಇಲ್ಲದೆ ಏನು ಮಾಡಬೇಕು ಎಂದು ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ. ದುಬಾರಿ ಬೆಲೆಯ ಬೀಜ ಗೊಬ್ಬರ ಖರೀದಿಸಿ ಬಿತ್ತನೆಗೆ ಮುಂದಾಗಿದ್ದು, ರೈತರಿಗೆ ಒಣ ಹವೆ ಬೆವರು ಬರುವಂತೆ ಮಾಡಿದೆ.

ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತ ಸಮೂಹ ದಿಕ್ಕು ಕಾಣದಂತಾಗಿ ಮುಗಿಲು ಕಡೆಗೆ ತಮ್ಮ ನೋಟ ನೆಟ್ಟಿದ್ದರು. ಮಳೆರಾಯನಿಗೆ ಕರುಣೆ ಇಲ್ಲವಾಗಿದೆ ಎನ್ನುತ್ತಿದೆ ರೈತ‌ ಸಮೂಹ.

ಮುಂದಿನ ದಿನಗಳಲ್ಲಿ ಮಳೆಯಾಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡು ಈಗಾಗಲೇ ಹೆಸರು,ಗೋವಿನ ಜೋಳ ಹಾಗೂ ಬಿಟಿ ಹತ್ತಿ ಬಿತ್ತನೆ ಮಾಡಿರುವ ರೈತರು ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿರುವ ದೃಶ್ಯ ತಾಲೂಕಿನ ಬಹುತೇಕ ಭಾಗಗಳಲ್ಲಿ ಕಂಡು ಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ಶಿಗ್ಲಿ ಗ್ರಾಮದ ರೈತ ರಾಜು ಯತ್ತಿನಹಳ್ಳಿ ಹೇಳಿದರು.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಕಳೆದ ವಾರ ಆಗಿರುವ ಮಳೆಯು ಕೆಲ ಭಾಗಗಳಲ್ಲಿ ಮಾತ್ರ ತಕ್ಕ ಮಟ್ಟಿಗೆ ಹಸಿಯಾಗಿದ್ದರಿಂದ ಬಿತ್ತನೆಗೆ ಸೂಕ್ತವಾಗಿಲ್ಲ. ರೈತರು ತೇವಾಂಶ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು. ಹೆಸರು ಬೀಜ ಬಿತ್ತಲು ಜೂನ್ ಮೊದಲ ವಾರದವರೆಗೆ ಅವಕಾಶವಿದೆ. ಮುಂಗಾರು ಮಳೆಯು ರಾಜ್ಯ ಪ್ರವೇಶ ಮಾಡಿದೆ. ಮುಂದಿನ ವಾರದೊಳಗೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ರೈತರು ಹತಾಶರಾಗಬಾರದು ಎಂದು ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.