ಫ್ರೈಡ್ ರೈಸ್, ಚಿಕನ್ ಕಟ್ಲೆಟ್, ಮೊಮೊಸ್, ಥಂಡರ್ ಕೊಕೊನೆಟ್, ಚಿಕನ್ ಬಿರಿಯಾನಿ, ಪಲಾವ್, ಬ್ರೂಸ್ಟೆಡ್ ಚಿಕನ್, ಪಾನೀಪುರಿ, ಮಸಾಲಾಪುರಿ, ಚಟ್ಪಟೆ ಚಾಟ್, ಕೇಸರಿಬಾತ್, ವೆಜ್ ಪಲಾವ್, ಮಜ್ಜಿಗೆ, ತಂಪು ಪಾನೀಯಗಳು, ಕಸ್ಟರ್ಡ್ ಸೇರಿದಂತೆ ವಿವಿಧ ತರಕಾರಿ ಮತ್ತು ಸೊಪ್ಪಿನ ಪಲ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಶಿಕ್ಷಣದ ಜೊತೆಗೆ ಬದುಕುವ ಕಲೆಯನ್ನು ತಿಳಿಯುವ ಉದ್ದೇಶದಿಂದ ಪಟ್ಟಣದ ಅಚೀವರ್ಸ್ ಕಾಲೇಜಿನಲ್ಲಿ ಬೃಹತ್ ಆಹಾರ ಮೇಳವನ್ನು ವಿದ್ಯಾರ್ಥಿಗಳೇ ಆಯೋಜಿಸಿದರು.

ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯುವ ಮೂಲಕ 100ಕ್ಕೂ ಹೆಚ್ಚು ಬಗೆಯ ರುಚಿಕರ ತಿನಿಸುಗಳನ್ನು ಸ್ವತಃ ತಯಾರಿಸಿ ಮಾರಾಟ ಮಾಡಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು. ಫ್ರೈಡ್ ರೈಸ್, ಚಿಕನ್ ಕಟ್ಲೆಟ್, ಮೊಮೊಸ್, ಥಂಡರ್ ಕೊಕೊನೆಟ್, ಚಿಕನ್ ಬಿರಿಯಾನಿ, ಪಲಾವ್, ಬ್ರೂಸ್ಟೆಡ್ ಚಿಕನ್, ಪಾನೀಪುರಿ, ಮಸಾಲಾಪುರಿ, ಚಟ್ಪಟೆ ಚಾಟ್, ಕೇಸರಿಬಾತ್, ವೆಜ್ ಪಲಾವ್, ಮಜ್ಜಿಗೆ, ತಂಪು ಪಾನೀಯಗಳು, ಕಸ್ಟರ್ಡ್ ಸೇರಿದಂತೆ ವಿವಿಧ ತರಕಾರಿ ಮತ್ತು ಸೊಪ್ಪಿನ ಪಲ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಝುಲ್ಫಿಕರ್ ಅಹಮದ್, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಭವಿಷ್ಯದಲ್ಲಿ ಸ್ವಾವಲಂಬಿಯಾಗಿ ಬದುಕುವ ಕಲೆಯನ್ನು ವಿದ್ಯಾರ್ಥಿ ಹಂತದಲ್ಲಿಯೇ ಕಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿಗಳಿಂದಲೇ ಆಹಾರ ಮೇಳವನ್ನು ಆಯೋಜಿಸಿ, ಅವರಿಗೆ ವ್ಯವಹಾರದ ಪ್ರಾಥಮಿಕ ಜ್ಞಾನ ಪಡೆದುಕೊಳ್ಳಲು ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದರು.

ಕಳೆದ ಹತ್ತು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್‍ಯಾಂಕುಗಳನ್ನು ಪಡೆದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿಯೂ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಭಾಗವಹಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿನಿ ಅಶ್ವಿನಿ ಮಾತನಾಡಿ, ಪಠ್ಯದಲ್ಲಿ ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಇಂತಹ ಕಾರ್ಯಕ್ರಮಗಳು ಬಹಳ ಸಹಾಯಕವಾಗುತ್ತವೆ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸದಾ ಪ್ರೋತ್ಸಾಹ ನೀಡುತ್ತಾರೆ. ಇಂದು ನಾವೇ ತಯಾರಿಸಿದ ತಿನಿಸುಗಳನ್ನು ಪೋಷಕರು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ವ್ಯವಹಾರದ ಅನುಭವ ಪಡೆದಿದ್ದೇವೆ ಎಂದರು.

ಮತ್ತೊಬ್ಬ ವಿದ್ಯಾರ್ಥಿನಿ ಹೇಮಲತಾ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತವೆ. ತರಗತಿಗಳ ಜೊತೆಗೆ ಇಂತಹ ಕಾರ್ಯಕ್ರಮಗಳು ನಡೆದಾಗ ಯಾವುದೇ ಒತ್ತಡವಿಲ್ಲದೆ ಆನಂದದಿಂದ ಭಾಗವಹಿಸಲು ಸಾಧ್ಯವಾಗುತ್ತದೆ. ನಾನು ಇಂದು ಇಂಡಿಯನ್ ಚಾಟ್ ತಯಾರಿಸಿ ಮಾರಾಟ ಮಾಡಿದೆ. ಎಲ್ಲರೂ ಒಟ್ಟಾಗಿ ಶ್ರಮಿಸಿದ್ದರಿಂದ ತಂಡ ಭಾವನೆ ಬೆಳೆಯಿತು ಮತ್ತು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು ಎಂದರು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ್ ಕೊಗರವಳ್ಳಿ ಉದ್ಘಾಟಿಸಿ, ವಿದ್ಯಾರ್ಥಿನಿಯರ ಕೌಶಲ್ಯ, ಉತ್ಸಾಹ ಹಾಗೂ ಸೃಜನಶೀಲತೆಯನ್ನು ಶ್ಲಾಘಿಸಿದರು.

ಕಾಲೇಜು ಆವರಣದಲ್ಲಿ ನಡೆದ ಈ ಆಹಾರ ಮೇಳಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.