ಜನಾಕರ್ಷಣೆ ಕೇಂದ್ರವಾದ ಆಹಾರ ಪರ್ವ

| Published : Jan 12 2025, 01:16 AM IST

ಸಾರಾಂಶ

ಮಮತಾ ತಯಾರಿಸಿದ ದೇಶೀಯ ಆಹಾರ ಪದಾರ್ಥಗಳು ಭೇಟಿ ನೀಡಿದ ಪ್ರತಿಯೊಬ್ಬರ ನಾಲಿಗೆ ರುಚಿ ಹೆಚ್ಚಿಸಿ ಮೆಚ್ಚುವಂತೆ ಮಾಡಿತು.

ಕೊಟ್ಟೂರು: ಪಟ್ಟಣದ ಹ್ಯಾಳ್ಯ ರಸ್ತೆಯಲ್ಲಿನ ಶ್ರೀ ಮಹದೇವ ಇಂಟರ್ ನ್ಯಾಷನಲ್ ಸ್ಕೂಲ್ ನವರು ಶನಿವಾರ ಏರ್ಪಡಿಸಿದ್ದ ಆಹಾರ ಪರ್ವ ಜನಾಕರ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿತು.

ಸ್ಕೂಲಿನ ವಿಶಾಲವಾದ ಆವರಣದಲ್ಲಿ ಈ ಭಾಗದಲ್ಲಿಯೇ ಹೊಸ ಬಗೆಯ ಕಲ್ಪನೆಯನ್ನು ಈ ಆಹಾರದ ಪರ್ವದ ಮೂಲಕ ಹುಟ್ಟು ಹಾಕಿದ ಮಾನಸ ಮಧುಸೂದನ್ ಜನತೆಯನ್ನು ಮತ್ತೆ ಹಳೆಯ ಗ್ರಾಮೀಣ ಪರಿಸರ ಮತ್ತು ದೇಶೀಯ ಆಹಾರ ವ್ಯವಸ್ಥೆಯತ್ತ ಕೊಂಡ್ಯೊಯ್ದಿತು.

ಆಹಾರ ಪರ್ವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕಿಯಾರಾದ ವಾಣಿ ನೇಮರಾಜ ನಾಯ್ಕ್, ಗೀತಾ ಹರ್ಷವರ್ಧನ್, ಗಿರಿಜಾ ಮಂಜುನಾಥ, ಗಾಯತ್ರಿ ಅಶೋಕ ಅವರನ್ನು ಅದ್ಧೂರಿಯಾಗಿ ಸಾಂಪ್ರದಾಯಿಕ ಗ್ರಾಮೀಣ ಸೊಗಡಿನ ಸ್ವಾಗತದೊಂದಿಗೆ ಶಾಲೆಯವರು ಬರಮಾಡಿಕೊಂಡರು.

ಸ್ಕೂಲಿನ ಒಳಾವರಣದಲ್ಲಿ ಗ್ಯಾಸ್ ಒಲೆಯಲ್ಲಿ ತಯಾರು ಮಾಡಿದ ಆಹಾರ ಪದಾರ್ಥಗಳ ಪ್ರದರ್ಶನ ಇದ್ದರೆ ಹೊರ ಆವರಣದಲ್ಲಿ ಪಾಕ ದರ್ಪಣ, ಸಂಸ್ಕೃತಿ ಕುಟೀರ, ತೋಟದ ಮನೆ, ಆರೋಗ್ಯ ಬೋಗಿ, ಹಳ್ಳಿ ಮನೆ, ಮೂಡಲ ಮನೆ, ಸವಿರುಚಿ ಕುಟೀರ ಮತ್ತಿತರ ಮಳಿಗೆಗಳಲ್ಲಿ ಹಳೆಯ ಕಾಲದ ಕಟ್ಟಿಗಿಗಳ ಒಲೆಗಳಲ್ಲಿ ಬಿಸಿ ಬಿಸಿಯಾಗಿ ತಯಾರು ಮಾಡಿದ ಜೋಳದ ರೊಟ್ಟಿ, ಪಲ್ಯಗಳು, ಉದ್ದು, ರಾಗಿ, ಸಜ್ಜೆ, ಮೆತ್ತೆ, ಕಡ್ಲಿಹಿಟ್ಟು, ಶೇಂಗಾ ಪುಡಿ, ಅಗಸೆ ಪುಡಿ, ಮಸಾಲ ಮಜ್ಜಿಗೆ ಮತ್ತಿತರ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು.

ಡಾ.ಅನುಪಮಾ, ಸವಿತಾ ಪಾಟೀಲ್, ಸವಿತಾ ಬಸವರಾಜ್, ಪ್ರೀತಿ ವೀರೇಶ್, ನೇತ್ರಾವತಿ, ಟಿ. ಮಮತಾ ತಯಾರಿಸಿದ ದೇಶೀಯ ಆಹಾರ ಪದಾರ್ಥಗಳು ಭೇಟಿ ನೀಡಿದ ಪ್ರತಿಯೊಬ್ಬರ ನಾಲಿಗೆ ರುಚಿ ಹೆಚ್ಚಿಸಿ ಮೆಚ್ಚುವಂತೆ ಮಾಡಿತು. ಒಟ್ಟಾರೆಯಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ಆಹಾರ ಪರ್ವ ಪ್ರತಿವರ್ಷ ಆಯೋಜಿಸುವಂತೆ ಪ್ರೇರೇಪಣೆ ನೀಡಿತು.

ಶಾಲಾ ಆಡಳಿತ ಅಧಿಕಾರಿ ಬಸಾಪುರ ಪಂಪಾಪತಿ, ಸರೋಜಾ ಪಂಪಾಪತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದ ನಂತರ ರೈತರಾದ ಎನ್. ಭರಮ್ಮಣ್ಣ, ಶ್ರೀಧರ ಒಡೆಯರ್, ಪರಶಪ್ಪ ಕೋಡಿಹಳ್ಳಿ, ಶಂಕರ ದೇಶಮುಖ್, ಅತಿಥಿಗಳಾದ ವಾಣಿ ನೇಮರಾಜ್ ನಾಯ್ಕ್, ಗೀತಾ ಹರ್ಷವರ್ಧನ್, ಗಿರಿಜಾ ಮಂಜುನಾಥ ಗಾಯತ್ರಿ ಅಶೋಕ ಅವರನ್ನು ಸನ್ಮಾನಿಸಲಾಯಿತು.