ಅ. 21ರಿಂದ ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನ

| Published : Oct 17 2024, 12:05 AM IST

ಸಾರಾಂಶ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅ. 21 ರಿಂದ ನ. 20ರ ವರೆಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದ್ದು, ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅ. 21 ರಿಂದ ನ. 20ರ ವರೆಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದ್ದು, ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಕೋರಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ನಿಯಂತ್ರಣದ 6ನೇ ಸುತ್ತಿನ ಲಸಿಕಾ ಅಭಿಯಾನದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದನ ಮತ್ತು ಎಮ್ಮೆಗೆ ಕಾಲು ಬಾಯಿ ರೋಗ ಕಾಣಿಸಿಕೊಳ್ಳಲಿದೆ. ಆದ್ದರಿಂದ ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ಅಲ್ಲಲ್ಲಿ ಮನೆಗಳು ಇರುವುದರಿಂದ ಲಸಿಕೆ ಹಾಕಲು ಯಾವುದೇ ಜಾನುವಾರು ಬಿಟ್ಟು ಹೋಗದಂತೆ ಅಗತ್ಯ ವಾಹನ ನಿಯೋಜಿಸಲು ಹಾಸನದ ಹಾಲು ಒಕ್ಕೂಟದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಲಿಂಗರಾಜು ದೊಡ್ಡಮನಿ ಮಾತನಾಡಿ ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯ. ಈ ರೋಗದ ವಿರುದ್ಧ ಪ್ರತೀ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಯಬೇಕಿದೆ ಎಂದರು.

ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಭಿಯಾನದಲ್ಲಿ 6ನೇ ಸುತ್ತಿನಲ್ಲಿ ಲಸಿಕೆ ವಿತರಣೆಗಾಗಿ 57 ಸಾವಿರ ಲಸಿಕೆ ಪೂರೈಕೆಯಾಗಿದೆ. ಈಗಾಗಲೇ 5ನೇ ಸುತ್ತಿನಲ್ಲಿ 2,450 ಲಸಿಕೆ ಉಳಿದಿದ್ದು, ಒಟ್ಟು 59,450 ಲಸಿಕೆ ದಾಸ್ತಾನು ಇದೆ ಎಂದು ಲಿಂಗರಾಜು ದೊಡ್ಡಮನಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ. ರೈತರು, ಜಾನುವಾರು ಮಾಲೀಕರು ಜಾನುವಾರುಗಳಿಗೆ ಲಸಿಕೆ ನೀಡಲು ಸಹಕರಿಸುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.

ಲಸಿಕೆ ಉಚಿತ:

ಲಸಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಕೋರಿದರು.

6ನೇ ಸುತ್ತಿಗೆ ಈಗಾಗಲೇ 70 ಸಾವಿರ ಸಿರಿಂಜ್ ಪೂರೈಕೆಯಾಗಿದೆ. ಕಾಲುಬಾಯಿ ಲಸಿಕಾ ಕಾರ್ಯಕ್ರಮ ಕೈಗೊಳ್ಳಲು ಜಿಲ್ಲೆಯಲ್ಲಿ 13 ತಾಂತ್ರಿಕ ಅಧಿಕಾರಿಗಳು, 31 ಅರೆ ತಾಂತ್ರಿಕ ಸಿಬ್ಬಂದಿ, 7 ಡಿ ದರ್ಜೆ ನೌಕರರು, 13 ಹೊರಗುತ್ತಿಗೆ ನೌಕರರು, 4 ಮೈತ್ರಿ ಸಿಬ್ಬಂದಿ, ಒಬ್ಬ ಕೆಎಂಎಫ್ ಒಟ್ಟು 69 ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಸೀರೋ ಮಾನಿಟರಿಂಗ್ ನಿರ್ವಹಣೆಗಾಗಿ ಸೋಮವಾರಪೇಟೆ ತಾಲ್ಲೂಕಿನ ಕೆಳಕೊಡ್ಲಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದು ಲಿಂಗರಾಜು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ಜಂಟಿ ನಿರ್ದೇಶಕ ಡಾ.ಪ್ರಸನ್ನ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ(ಮಡಿಕೇರಿ), ಡಾ.ನವೀನ್ (ವಿರಾಜಪೇಟೆ), ಡಾ.ಗಿರೀಶ್ (ಪೊನ್ನಂಪೇಟೆ), ಡಾ.ರಾಜಶೇಖರ್ (ಸೋಮವಾರಪೇಟೆ), ಡಾ.ಸಂಜೀವ್ ಶಿಂಧೆ(ಕುಶಾಲನಗರ),ಹಿರಿಯ ಪಶುವೈದ್ಯಾಧಿಕಾರಿ ಡಾ.ಶಿಲ್ಪ ಇತರರು ಇದ್ದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸಂಬಂಧ ಸರ್ಕಾರದಿಂದ ಹೊರತಂದಿರುವ ಭಿತ್ತಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.