ಸಾರಾಂಶ
ಹುಬ್ಬಳ್ಳಿ:
ವಿಪ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ನಕಲಿ ಗಾಂಧಿಗಳ ಪಾದ ನೆಕ್ಕುವವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿಯವರು ನಾಥುರಾಮ್ ಗೋಡ್ಸೆ ಸಂತತಿಯವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂದಿಗೂ ಗೋಡ್ಸೆ ಭಾವಚಿತ್ರಕ್ಕೆ ಪೂಜೆ ಮಾಡುತ್ತಾರೆಂಬ ಹರಿಪ್ರಸಾದ್ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದರು. ಈಗಿನ ಕಾಂಗ್ರೆಸ್‌ನಲ್ಲಿ ಇರುವವರೆಲ್ಲ ನಕಲಿ ಗಾಂಧಿಗಳು. ಇಂತಹ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್‌ಗೆ ನಮ್ಮ ಬಗ್ಗೆ ಹೇಳುವ ನೈತಿಕತೆ ಇಲ್ಲ ಎಂದು ತರಾಟೆ ತೆಗೆದುಕೊಂಡರು.
ಹರಿಪ್ರಸಾದ್ ತಮ್ಮ ಯೋಗ್ಯತೆ ಅರಿತು ಮಾತನಾಡಲಿ. ಈ ಹಿಂದೆ ಸಿದ್ದರಾಮಯ್ಯ ನಿಕ್ಕರ್ ಹಾಕಲ್ಲವೆಂದು ಹೇಳಿದ್ದರು. ಇದೀಗ ಮುಖ್ಯಮಂತ್ರಿಗಳ ಪರ ಧ್ವನಿ ಎತ್ತುತ್ತಿದ್ದಾರೆ. ಬಹುಶಃ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ತೆಗೆದು ಹಾಕಿ ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿರಬೇಕು ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ಸಿಗರು ಹೀಗೆ ಮಾತನಾಡುತ್ತಲೇ ದೇಶದಲ್ಲಿ ತಿರಸ್ಕೃತಗೊಳ್ಳುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ. ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದರು.ಬಿಜೆಪಿ ಎಂದಿಗೂ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಂತಹ ಮಹಾನ್ ನಾಯಕರನ್ನು ಅತ್ಯಂತ ಗೌರವದಿಂದಲೇ ಕಾಣುತ್ತಿದೆ. ಎಲ್ಲರಿಗೂ ಸಮಾನ ಗೌರವವನ್ನೇ ಕೊಡುತ್ತಿದೆ. ಮಹಾತ್ಮ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜಿಪಿಯ ಪ್ರತಿಯೊಬ್ಬರೂ ಗೌರವದಿಂದಲೇ ನೋಡುತ್ತಾರೆ. ಬಿಜೆಪಿ ಅಸಲಿ ಗಾಂಧಿಗಳಿಗೆ, ಗಾಂಧಿವಾದಿಗಳಿಗೆ ಗೌರವ ನೀಡುತ್ತದೆಯೇ ವಿನಃ ನಕಲಿ ಗಾಂಧಿಗಳಿಗಲ್ಲ ಎಂಬುದನ್ನು ಅರಿತುಕೊಳ್ಳಲಿ ಎಂದರು.
ಸಂಪೂರ್ಣ ನಿರ್ನಾಮ:ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ. ಹಿಂದೆ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಭಯೋತ್ಪಾದಕರು ಮೃತಪಟ್ಟಾಗ ಸೋನಿಯಾ ಗಾಂಧಿ ನಿದ್ದೆ ಮಾಡಿರಲಿಲ್ಲ ಎಂದು ಅವರೇ ಹೇಳಿಕೊಂಡಿದ್ದರು. ಉಗ್ರವಾದಿ ಅಫ್ಜಲ್ ಗುರುಗೆ ಗಲ್ಲು ವಿಧಿಸಿದಾಗ ಕ್ಷಮಾಪಣೆ ಕೊಡುವ ಮಾತುಗಳನ್ನಾಡಿದ್ದು ಇದೇ ಕಾಂಗ್ರೆಸ್ಸಿನವರು. ಮುಸ್ಲಿಮರ ತುಷ್ಟೀಕರಣದಿಂದಾಗಿ ಮುಂದೆ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಜೋಶಿ ಭವಿಷ್ಯ ನುಡಿದರು.
ಮೃದು ಧೋರಣೆ ಸರಿಯಲ್ಲ:ಒಂದು ಕಾಲದಲ್ಲಿ 400 ಸ್ಥಾನ ಇದ್ದವರು ಇಂದು ನಿಮ್ಮ ಸ್ಥಿತಿ ಏನಾಗಿದೆ. ಲೋಕಸಭೆಯಲ್ಲಿ ನೀವು 100 ಸ್ಥಾನ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಸಂಪೂರ್ಣವಾಗಿ ಇಸ್ಲಾಮಿಕ್ ಮತಾಂಧತೆಯ ಶಕ್ತಿ ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಲ್ಲು ತೂರಿದವರು ಅಮಾಯಕರಾ?ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಅಮಾಯಕರ ಬಂಧನವಾಗಿದ್ದರೆ ಅವರನ್ನು ಬಂಧಿಸಿದ ಪೊಲೀಸರ ಮೇಲೆ ಸರ್ಕಾರ ಏನು ಕ್ರಮಕೈಗೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿ. ಪೊಲೀಸ್ ಠಾಣೆ, ವಾಹನಗಳ ಮೇಲೆ ಕಲ್ಲು ತೂರಿದವರು ಅಮಾಯಕರಾ? ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಲಿ. ಈ ಕುರಿತು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಿ ಮುಂದಿನ ಹೋರಾಟಕ್ಕೆ ಅಣಿಯಾಗಲಿದ್ದೇವೆ ಎಂದರು.