ಮಂಜುನಾಥ ಕೆ.ಎಂ.

ಬಳ್ಳಾರಿ: ರಾಜ್ಯ, ರಾಷ್ಟ್ರಮಟ್ಟದ ಫುಟ್‌ಬಾಲ್ ಕ್ರೀಡೆಯಲ್ಲಿ ನಿರಂತರ ಸಾಧನೆ ಮೂಲಕ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆ ತಂದಿರುವ ಬಳ್ಳಾರಿಯ ಹಿರಿಯರ ಫುಟ್‌ಬಾಲ್ ಕ್ರೀಡಾ ವಸತಿ ನಿಲಯವನ್ನು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಸ್ಥಳೀಯ ಕ್ರೀಡಾಪ್ರೇಮಿಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿಯ ಫುಟ್‌ಬಾಲ್ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿದ್ಯಾನಗರದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಪ್ರವೇಶ ಪಡೆದುಕೊಳ್ಳುವಂತೆ ಕ್ರೀಡಾ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಸ್ಥಳಾಂತರ ಏಕೆ?

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಫುಟ್‌ಬಾಲ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ 2018ರಲ್ಲಿ ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಕ್ರೀಡಾ ವಸತಿ ನಿಲಯವನ್ನು ಆರಂಭಿಸಲಾಗಿತ್ತು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ಕೇಂದ್ರವಿತ್ತು. ಪದವಿಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿತ್ತು. ಕಳೆದ ಎಂಟು ವರ್ಷಗಳಲ್ಲಿ ಈ ಕೇಂದ್ರವು ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ರೂಪಿಸಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ.


ವಸತಿ ನಿಲಯದ ತಂಡವು ವಿವಿಧ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 5 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದಿದೆ. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ "ಬಿ " ವಿಭಾಗದಿಂದ ಪ್ರತಿಷ್ಠಿತ "ಎ " ವಿಭಾಗಕ್ಕೆ ಪದೋನ್ನತಿ ಹೊಂದಿರುವುದು ಇದರ ಸಾಧನೆಗೆ ಸಾಕ್ಷಿಯಾಗಿದೆ. ಇಲ್ಲಿನ ಕ್ರೀಡಾಪಟುಗಳು ಖೇಲೋ ಇಂಡಿಯಾ ಯೂತ್ ಗೇಮ್ಸ್ (ಯು-20), ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್, ಆಲ್ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಷ್ಟಾಗಿಯೂ ಕ್ರೀಡಾ ವಸತಿ ನಿಲಯವನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

ನಿಷ್ಕಾಳಜಿಯೂ ಕಾರಣ:

ಕ್ರೀಡಾ ವಸತಿ ಕೇಂದ್ರ ಬಲಪಡಿಸುವ ಬದಲು ಸ್ಥಳಾಂತರಕ್ಕೆ ಮುಂದಾಗಿರುವ ಕ್ರೀಡಾ ಇಲಾಖೆಯ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಧ್ವನಿ ಎತ್ತದ ಜಿಲ್ಲೆಯ ಜನಪ್ರತಿನಿಧಿಗಳ ನಿಷ್ಕಾಳಜಿಯೇ ಇದಕ್ಕೆ ಕಾರಣ ಎಂದು ಜನಾಕ್ರೋಶ ವ್ಯಕ್ತವಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಹಾಗೂ ಇತರ ಹಿಂದುಳಿದ ಜಿಲ್ಲೆಗಳ ಗ್ರಾಮೀಣ ಯುವಕರಿಗೆ ಈ ಕೇಂದ್ರ ಸುಲಭವಾಗಿ ತಲುಪಬಹುದಾದ ತರಬೇತಿ ತಾಣವಾಗಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಕಡಿಮೆ ವೆಚ್ಚದಲ್ಲಿ ಇಲ್ಲಿ ತರಬೇತಿ ಪಡೆದು ತಮ್ಮ ಪ್ರತಿಭೆ ಬೆಳೆಸಿಕೊಳ್ಳುತ್ತಿದ್ದರು. ಬೆಂಗಳೂರು ಮಾದರಿಯ ಮಹಾನಗರದಲ್ಲಿ ವಾಸ, ಪ್ರಯಾಣ, ಇತರ ವೆಚ್ಚಗಳನ್ನು ಭರಿಸುವುದು ಗ್ರಾಮೀಣ ಬಡ ಕುಟುಂಬಗಳಿಗೆ ಕಷ್ಟಸಾಧ್ಯ. ಇದರಿಂದ ಅನೇಕ ಪ್ರತಿಭೆಗಳು ಆರಂಭದಲ್ಲೇ ಕ್ರೀಡಾ ಕ್ಷೇತ್ರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಕ್ರೀಡಾ ಅವಕಾಶಗಳ ವಿಕೇಂದ್ರೀಕರಣದ ಬದಲು ಎಲ್ಲ ಸೌಲಭ್ಯಗಳನ್ನು ರಾಜಧಾನಿಗೆ ಕೇಂದ್ರೀಕರಿಸುವ ಕ್ರಮವು ಪ್ರಾದೇಶಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಜಿಲ್ಲೆಗೆ ಅನ್ಯಾಯವಾಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇವರಿಗೆ ಜಿಲ್ಲೆಯ ಕ್ರೀಡಾಪಟುಗಳಿಗೆ ಕಾಳಜಿ ಇಲ್ಲವೇ? ಎಂದು ಸ್ಥಳೀಯ ಯುವ ಕ್ರೀಡಾಪಟುಗಳಾದ ಸೂರಜಕುಮಾರ್, ರಾಜೇಶ್ ಪ್ರಶ್ನಿಸುತ್ತಾರೆ.

ಜಿಲ್ಲೆಯ ಜನಪ್ರತಿನಿಧಿಗಳು, ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರೀಡಾಪಟುಗಳ ಭವಿಷ್ಯದ ಹಿತದೃಷ್ಟಿಯಿಂದ ಫುಟ್‌ಬಾಲ್ ಕ್ರೀಡಾ ವಸತಿ ನಿಲಯವನ್ನು ಬಳ್ಳಾರಿಯಲ್ಲಿಯೇ ಮುಂದುವರಿಸುವ ಕುರಿತು ಪೂರಕ ಕ್ರಮ ವಹಿಸಬೇಕಾಗಿದೆ.

ಫುಟ್‌ಬಾಲ್ ಕ್ರೀಡಾ ವಸತಿ ನಿಲಯ ಬೆಂಗಳೂರಿಗೆ ಸ್ಥಳಾಂತರಗೊಳಿಸಿರುವ ನಿಲುವಿನಿಂದ ಈ ಭಾಗದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎನ್ನುತ್ತಾರೆ ಕಲ್ಯಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್‌. ಸಂತೋಷ್‌ ರೆಡ್ಡಿ.