ಕನ್ನಡಪ್ರಭ ವಾರ್ತೆ ಹಾಸನ

ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗುವ ಮೂಲಕ ಜನ ಸಮಾನ್ಯರ ಹಾಗೂ ವಿವಿಧ ಸೌಲಭ್ಯದಿಂದ ವಂಚಿತರಾದವರಿಗೆ ಸಹಾಯ ಮಾಡುವ ದೊಡ್ಡ ಸಂಸ್ಥೆಯಾಗಿದೆ ಎಂದು ರೋಟರಿ-೩೧೮೨ರ ೨೦೨೮-೨೯ನೇ ಸಾಲಿನ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲಿವಿಸ್ ಹೇಳಿದರು. ನಗರ ಹೊರವಲಯದ ನಂದ ಗೋಕುಲ ಸಮುದಾಯ ಭವನದಲ್ಲಿ ಇತ್ತೀಚೆಗೆ ರೋಟರಿ ಕ್ಲಬ್ ಹಾಸನ ರಾಯಲ್ ಸಂಸ್ಥೆ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಡೆಸಸಿಕೊಟ್ಟು ಮಾತನಾಡಿದ ಅವರು, ರೋಟರಿ ಸಂಸ್ಥೆ ಸಮಾಜದಲ್ಲಿನ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ಸಮಾಜದ ಬದಲಾವಣೆಗಾಗಿ ದುಡಿಯುತ್ತಿದೆ. ಅದರಲ್ಲೂ ಸಮಾಜದಲ್ಲಿನ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ರೋಟರಿ ಸಂಸ್ಥೆ ಕೆಲಸ ಮಾಡಬೇಕು. ದೇಶ ಹಾಗೂ ಪ್ರಪಂಚದಲ್ಲಿ ಸಮಸ್ಯೆಗಳು ಎದುರಾದಾಗ ರೋಟರಿ ಸಂಸ್ಥೆ ಸ್ಪಂದಿಸಿದೆ. ರೋಟರಿ ಸಂಸ್ಥೆ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದು, ಮತ್ತಷ್ಟು ಕೆಲಸ ಮಾಡಿಕೊಂಡು ಸಾಗಲಿ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಪ್ರಗತಿಪರ ರೈತ ಹಾಗೂ ಕನ್ನಡ ರಾಜ್ಯೋತ್ಸವ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಮಾತನಾಡಿ, ಯಾವುದೇ ಜಾತಿ ಹಾಗೂ ರಾಜಕೀಯವಿಲ್ಲದ ಸಂಸ್ಥೆ ರೋಟರಿ. ರೈತರಿಗೆ, ಬಡ ಶಾಲಾ ಮಕ್ಕಳಿಗೆ, ರೈತ ಮಹಿಳೆಯರಿಗೆ, ಆರ್ಥಿಕ ದುರ್ಬಲರಿಗೆ ರೋಟರಿ ಸಂಸ್ಥೆ ಹಲವು ವರ್ಷಗಳಿಂದ ಸಹಾಯ ಮಾಡಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುವುದರೊಂದಿಗೆ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಹೇಳಿದರು.

ರೋಟರಿ-೩೧೮೨ರ ವಲಯ ೯ರ ಸಹಾಯಕ ಗವರ್ನರ್ ಮಂಜುನಾಥ್ ಎ. ಮಾತನಾಡಿ, ರೋಟರಿ ಸಂಸ್ಥೆ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡಿಕೊಂಡು ಸಾಗಲಿ. ಸಮಾಜದಲ್ಲಿನ ಇನ್ನು ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ರೋಟರಿ ಸಂಸ್ಥೆ ಕೆಲಸ ಮಾಡಬೇಕು ಎಂದರು.

ನೂತನ ಅಧ್ಯಕ್ಷ ದಿಲೀಪ್ ಕುಮಾರ್ ಎಚ್.ಕೆ. ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬಡವರು, ಬಡ ಮಕ್ಕಳಿಗೆ ಉತ್ತಮ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.


ಪದಗ್ರಹಣಾಧಿಕಾರಿ ಅಲೆನ್ ವಿ ಲಿವಿಸ್ ಅವರ ಸಮ್ಮುಖದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ೨೦೨೫-೨೬ನೇ ಸಾಲಿಗೆ ಅಧ್ಯಕ್ಷರಾಗಿದ್ದ ಬಿ.ಕೆ. ಟೈಮ್ಸ್ ಗಂಗಾಧರ್ ಅವರು ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷ ದಿಲೀಪ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ರೋಟರಿ-೩೧೮೨ರ ವಲಯ ೯ರ ವಲಯ ಸೇನಾನಿ ಸಚಿನ್ ಯು.ವಿ., ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ನೂತನ ಕಾರ್ಯದರ್ಶಿ ಡಾ.ಹರೀಶ್ ಎಚ್.ಎನ್., ಖಜಾಂಚಿ ಪವನ್ ಎಂ.ವಿ., ಮಾಜಿ ಕಾರ್ಯದರ್ಶಿ ರವಿ ಕುಮಾರ್ ಹಾಗೂ ಇತರರು ಹಾಜರಿದ್ದರು.