ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ

| Published : Feb 22 2024, 01:46 AM IST / Updated: Feb 22 2024, 01:47 AM IST

ಸಾರಾಂಶ

ಯಾದಗಿರ ನಗರದ ಆರ್‌ಟಿಓ ಕಚೇರಿಯಿಂದ ನೇತಾಜಿ ವೃತ್ತ, ಶಾಸ್ತ್ರಿ ವೃತ್ತ, ಕೋರ್ಟ್ ರಸ್ತೆ, ಕನಕ ವೃತ್ತದವರೆಗೆ ರಸ್ತೆಯ ಎರಡು ಬದಿಯ ಫುಟ್‌ಪಾತ್ ಮೇಲಿನ ಅಂಗಡಿ ತೆರವು

ಯಾದಗಿರಿ:

ನಗರಸಭೆಯಿಂದ ಬುಧವಾರ ಬೆಳಗ್ಗೆಯಿಂದಲೇ ಪ್ರಮುಖ ರಸ್ತೆಗಳ ಬದಿಯಲ್ಲಿ ಫುಟ್‌ಪಾತ್ (ಪಾದಚಾರಿ ಪಥ) ಸ್ಥಳ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಅಂಗಡಿ-ಮುಂಗ್ಗಟ್ಟು ತೆರವುಗೊಳಿಸುವ ಕಾರ್ಯಾಚರಣೆ ಜರುಗಿತು.

ನಗರದ ಜನರ ಬಹುದಿನದ ಜನರ ಬೇಡಿಕೆಯಾದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳ ಮೇಲೆ ಅನುಮತಿಯಿಲ್ಲದೇ ಅಕ್ರಮವಾಗಿ ಟಿನ್ ಅಂಗಡಿ ಡಬ್ಬಾ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಹಲವು ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ಟಿನ್ ಹಾಕಿದ್ದರು. ಇದರಿಂದ ಸಾರ್ವಜನಿಕರಿಗೆ ವಾಹನಗಳ ನಿಲುಗಡೆ, ಅಲ್ಲದೇ ತಿರುಗಾಡಲು ಕೂಡ ತೊಂದರೆಯಾಗಿತ್ತು,

ಈ ಕುರಿತು ಸಾರ್ವಜನಿಕರು ಹಲವಾರು ಭಾರಿ ನಗರಸಭೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತರಡ್ಡಿ, ಎಇಇ ರಜನೀಶ ಶೃಂಗೇರಿ, ಪರಿಸರ ಅಭಿಯಂತರ ಪ್ರಶಾಂತ, ಎಸ್.ಐ. ಶರಣಮ್ಮ, ಸಲೀಂ, ನಾಗರಾಜ, ಪೊಲೀಸರೊಂದಿಗೆ ಜೆಸಿಬಿ ಹಾಗೂ ಟ್ರಾಕ್ಟರ್‌ ತೆಗೆದುಕೊಂಡು ಕಾರ್ಯಾಚರಣೆಗೆ ಇಳಿದರು.

ಬೆಳಗ್ಗೆ ಆರ್‌ಟಿಓ ಕಚೇರಿಯಿಂದ ನೇತಾಜಿ ವೃತ್ತ, ಶಾಸ್ತ್ರಿ ವೃತ್ತ, ಕೋರ್ಟ್ ರಸ್ತೆ, ಕನಕ ವೃತ್ತದವರೆಗೆ ರಸ್ತೆಯ ಎರಡು ಬದಿಯ ಫುಟ್‌ಪಾತ್ ಮೇಲಿನ ಅಂಗಡಿ ತೆರವುಗೊಳಿಸಿದರು.

ಗುರುವಾರವೂ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತರಡ್ಡಿ ತಿಳಿಸಿದ್ದಾರೆ.