ಸಾರಾಂಶ
ಸೊರಬ ಪಟ್ಟಣದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ಸಮಾಜ ಸಂಜೀವಿನಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸೊರಬ
ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ತಾರತಮ್ಯಗಳನ್ನು ಹೋಗಲಾಡಿಸಿ ಜಿಡ್ಡುಗಟ್ಟಿದ ಸಮಾಜಕ್ಕೆ ಸಂಜೀವಿನಿ ಯಾಗಿ ಬಂದವರೇ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಎಂದು ಜಡೆ ಹಿರೇಮಠದ ಘನಬಸವ ಶ್ರೀ ಅಮರೇಶ್ವರ ಶಿವಾ ಚಾರ್ಯ ಮಹಾಸ್ವಾಮಿಗಳು ತಿಳಿಸಿದರು.ಮಂಗಳವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ಸಮಾಜ ಸಂಜೀವಿನಿ ಹಾನಗಲ್ಲ ಕುಮಾರ ಮಹಾ ಶಿವಯೋಗಿ ಗಳ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಸಾಮಾನ್ಯರಂತೆ ಹುಟ್ಟಿ ಸಾಮಾನ್ಯರಂತೆ ಬದುಕಿದರೂ ಅಸಾಮಾನ್ಯ ಕಾರ್ಯ ಮಾಡಿದವರು ಶ್ರೀಗಳು. ಬಡತನದಲ್ಲಿ ಹುಟ್ಟಿದ ಅವರು ಬಡತನ ಕಲಿಸಿದ ಪಾಠವನ್ನು ಮರೆಯಲಿಲ್ಲ. ಸಮಾಜದ ಅಗತ್ಯಗಳನ್ನು ಮನಗಂಡು ಅದನ್ನು ಪೂರೈಸಲು ಶ್ರಮಿಸಿದರು ಎಂದು ಹೇಳಿದರು.ಕಾಯಕ ದಾಸೋಹ, ಆಧುನಿಕ ಕೃಷಿ, ಸಂಸ್ಕಾರ, ವಿದ್ಯೆ, ವ್ಯಾಪಾರ, ಸಂಘಟನೆ, ನಾಡು-ನುಡಿ ಮುಂತಾದ ಎಲ್ಲಾ ಆಯಾಮ ದಲ್ಲೂ ನಾಡಿಗೆ ಕೀರ್ತಿ ತಂದವರು ಹಾನಗಲ್ಲ ಕುಮಾರೇಶ್ವರರು. ಇಂತಹ ಯೋಗಿಗಳಿಗೂ ಸೊರಬಕ್ಕೂ ಅವಿನಾಭಾವ ಸಂಬಂಧವಿದೆ. ಅವರು ಹಾನಗಲ್ ಮಠಕ್ಕೆ ಹೋಗುವ ಮುಂಚೆ ಕ್ಯಾಸನೂರು ಮಠದಲ್ಲಿಯೇ ಅನುಷ್ಠಾನ ಮಾಡಿದ ಇತಿಹಾಸ ವಿದೆ. ಅಂಥವರ ಸ್ಮರಣೆ ಮಾಡುವುದು ನಿಜಕ್ಕೂ ಪುಣ್ಯ ಕಾರ್ಯ ಎಂದರು.
ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಗುರುಕುಮಾರ ಪಾಟೀಲ್ ಮಾತನಾಡಿ, ಸಮಾಜದ ಸಂಘಟನೆಗೆ ಮಹಾಸಭಾ ಸ್ಥಾಪಿಸಿದವರು ಹಾನಗಲ್ಲ ಶ್ರೀಗಳು. ಇಂತಹ ಸಂಘಟನೆಯಲ್ಲಿ ಸೇವೆಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.ಪಟ್ಟಣದ ವೀರಶೈವ ಸಮಾಜದ ಪಟ್ಟಣದ ಹಿರಿಯರಾದ ನಿಜಗುಣ ಪಾಲಾಕ್ಷಪ್ಪ ಹಾಗೂ ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು. ಟೌನ್ ವೀರಶೈವ ಸಮಾಜದ ವಿಶ್ವನಾಥ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಕ್ಕನ ಬಳಗದ ಜಯಮಾಲ ಅಣ್ಣಾಜಿಗೌಡ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿದರು. ಉದ್ಯಮಿ ನಿಜಗುಣ ಚಂದ್ರಶೇಖರ್ ವಂದಿಸಿದರು. ಉದ್ಯಮಿ ನಾಗರಾಜ್ ಗುತ್ತಿ, ಲಿಂಗರಾಜ ಧೂಪದಮಠ, ನಾಗರಾಜ ಮೇಷ್ಟ್ರು, ಚಾಮರಾಜಪ್ಪ, ಸುನಿತಮ್ಮ, ಪುಷ್ಪ, ಲತಾ, ಉಮಾ, ಪ್ರದೀಪ್ ಬಾಡದಬೈಲು ಮೊದಲಾದವರು ಹಾಜರಿದ್ದರು.