ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇನ್ನು ಜಾತಿ ವ್ಯವಸ್ಥೆ ಇರುವ ಈ ದೇಶದಲ್ಲಿ ಮಕ್ಕಳಿಗೆ ಬುದ್ಧನ ಪ್ರಜ್ಞೆ ಜೊತೆಗೆ ಶೀಲದ ಅರಿವಿನ ಅಗತ್ಯತೆಯು ಹೆಚ್ಚು ಪ್ರಸ್ತುತವಾಗಿದೆ ಎಂದು ಖ್ಯಾತ ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ಮಕ್ಕಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಬಿತ್ತಿ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದ ಬುದ್ಧ ಪ್ರಜ್ಞೆ ಮಕ್ಕಳ ಮೈತ್ರಿ ಕಾರ್ಯಕ್ರಮದ ಅಂಗವಾಗಿ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸಮಾರಂಭವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದಿನವಿಡೀ ಮೊಬೈಲ್ ನೋಡೋ ಬದಲು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಸಮಾಜಕ್ಕೆ ಉತ್ತಮ ಭವಿಷ್ಯ ಇದೆ. ಇಲ್ಲಿ ಜಾತಿ, ಧರ್ಮ, ಬಡವ- ಶ್ರೀಮಂತ ಎಂಬ ಭೇದವಿಲ್ಲ. ಸಮಾನತೆ ಮತ್ತು ಸೌಹಾರ್ದತೆಯನ್ನು ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಪಠ್ಯದ ಜೊತೆಗೆ ಇದು ಹೆಚ್ಚು ಪ್ರಸ್ತುತವಾದ ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರು.

ಬುದ್ಧನ ಧಮ್ಮವು ಕೇವಲ ಪೂಜೆ ಅಥವಾ ವಿಧಿವಿಧಾನಗಳಿಗೆ ಸೀಮಿತವಾಗಿರದೆ, ಅದು ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳನ್ನು ಸುಧಾರಿಸುವ ನೈತಿಕ ಸಂಹಿತೆಯಾಗಿದೆ. ಸಾಂಪ್ರದಾಯಿಕ ಧರ್ಮಗಳು ದೇವರ ಅಸ್ತಿತ್ವದ ಸುತ್ತ ಸುತ್ತಿದರೆ, ಬುದ್ಧನ ಧಮ್ಮವು ಮನುಷ್ಯ ಮತ್ತು ಅವನ ಬದುಕಿನ ಸುಧಾರಣೆಯ ಸುತ್ತ ಸುತ್ತುತ್ತದೆ. ಕರುಣೆ, ಪ್ರಜ್ಞೆ ಮತ್ತು ಸಮಾನತೆಯು ಬುದ್ಧನ ಬೋಧನೆಗಳ ಮುಖ್ಯ ಸಾರವಾಗಿದ್ದು, ಇವುಗಳ ಮೂಲಕ ಮಾತ್ರ ಒಂದು ಸುಸಂಸ್ಕೃತ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು, ಆದ್ದರಿಂದ ಮಲ್ಕುಂಡಿ ಮಹದೇವಸ್ವಾಮಿ ಅವರ ತಂಡ ರೂಪಿಸಿರುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.


ಗೌತಮ ಬುದ್ಧನ ಪ್ರಜ್ಞೆ ಮತ್ತು ಪಂಚಶೀಲ ತತ್ವಗಳು ಮಾನವನ ಒಳಿತಿಗೆ, ಶಾಂತಿಗೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ. ಬೌದ್ಧ ಧರ್ಮದ ಆಧಾರವಾಗಿರುವ ಈ ತತ್ವಗಳು ಮನುಷ್ಯನ ದೈನಂದಿನ ನಡವಳಿಕೆ ಮತ್ತು ನೈತಿಕತೆಯನ್ನು ತಿದ್ದಲು ಮಾರ್ಗದರ್ಶನ ನೀಡುತ್ತವೆ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೊಬೈಲ್ ಮತ್ತು ಟಿವಿ ಗೀಳಿನಲ್ಲಿ ಸಿಲುಕಿರುವ ಮಕ್ಕಳಿಗೆ ಧಮ್ಮದ ಹಾದಿ ತೋರಿಸಬೇಕು. ಶೀಲ, ಸಮತೆ, ಕರುಣೆ, ಒಗ್ಗಟ್ಟು - ಇವೆಲ್ಲವೂ ಬುದ್ಧನ ಬೋಧನೆಯ ಮೂಲ. ಈ ಮೈತ್ರಿ ಕಾರ್ಯಕ್ರಮದ ಮೂಲಕ ನಾವು ಮಕ್ಕಳ ಮನಸ್ಸಿನಲ್ಲಿ ಮಾನವೀಯತೆಯ ಬೀಜ ಬಿತ್ತುತ್ತಿದ್ದೇವೆ. ಅದೇ ನಿಜವಾದ ಶಿಕ್ಷಣ ಎಂದರು.

ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು ರವರು ಮಾತನಾಡಿ, ಇಂದಿನ ತಲೆಮಾರಿಗೆ ಬುದ್ಧ, ಅಂಬೇಡ್ಕರ್ ಮತ್ತು ಎಲ್ಲಾ ದಾರ್ಶನಿಕರ ಜೀವನ ಚರಿತ್ರೆಗಳು ಮತ್ತು ಸಿದ್ಧಾಂತಗಳು ಅವಶ್ಯಕವಾಗಿದೆ. ಮಕ್ಕಳಿಗೆ ಈಗಿನಿಂದಲೇ ಈ ತಿಳಿವಳಿಕೆ ನೀಡಿದರೆ ಅವರು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ, ಮೈತ್ರಿ ಎಂಬ ಹೆಸರೇ ಹೇಳುವಂತೆ ಒಗ್ಗಟ್ಟಿನಿಂದ ಬದುಕುವ ಪಾಠ ಇದರಿಂದ ಸಿಗುತ್ತದೆ ಎಂದರು.

ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ಅಂಬೇಡ್ಕರ್ ರವರು ಸಂವಿಧಾನ ಬರೆದು, ಬುದ್ಧ ಕರುಣೆಯಿಂದ ಜಗತ್ತಿಗೆ ದಾರಿ ತೋರಿಸಿದ್ದು ಇದೆಲ್ಲವನ್ನೂ ಮಕ್ಕಳು ನೇರವಾಗಿ ತಿಳಿದುಕೊಳ್ಳಬೇಕು. ಮಕ್ಕಳ ಮೈತ್ರಿಯಿಂದಲೇ ದೊಡ್ಡ ಸಮಾಜ ನಿರ್ಮಾಣವಾಗುತ್ತದೆ. ಇಂತಹ ಕಾರ್ಯಕ್ರಮಗಳು ಪ್ರತಿ ತಾಲೂಕಿನಲ್ಲೂ ಆಗಬೇಕು ಎಂದರು.

ಕಾರ್ಯಕ್ರಮದ ಮೊದಲ ದಿನದ ಪ್ರಾರಂಭದಲ್ಲಿ ಬಂತೇಜಿಗಳು ಬುದ್ಧ ಧಮ್ಮ ಪ್ರವಚನ ನೀಡಿ, ಮಕ್ಕಳಿಗೆ ಶೀಲ, ಸಮತೆ, ಕರುಣೆಯ ಮಹತ್ವ ತಿಳಿಸಿದರು. ಶಿಕ್ಷಣದ ಜೊತೆಗೆ ನೈತಿಕತೆಯೂ ಬೆಳೆಯಬೇಕು. ಬುದ್ಧನ ಧಮ್ಮವೇ ಇಂದಿನ ದಿನಕ್ಕೆ ಅಗತ್ಯ. ಮೈತ್ರಿ ಎಂದರೆ ಎಲ್ಲರೂ ಒಂದಾಗಿ ಬದುಕುವ ಕಲೆ ಎಂದು ಕಿವಿಮಾತು ಹೇಳಿದರು.

ಈ ಬಾರಿಯ ಬುದ್ಧ ಪ್ರಜ್ಞೆ ಮಕ್ಕಳ ಮೈತ್ರಿಯಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ, ಚಿತ್ರಕಲೆ, ನಾಟಕ, ಕ್ವಿಜ್, ಬುದ್ಧ- ಅಂಬೇಡ್ಕರ್ ಜೀವನ ಚರಿತ್ರೆ ಆಧಾರಿತ ಪ್ರಶ್ನೋತ್ತರ, ದಾರ್ಶನಿಕರ ಕುರಿತ ಪ್ರದರ್ಶನ ಸೇರಿದಂತೆ ಸುಮಾರು ೩೩ ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಜೊತೆಗೆ ಆಯ್ದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ನಾಯಕತ್ವ ತರಬೇತಿ, ಭಾಷಣ ತರಬೇತಿ ಮತ್ತು ಮೌಲ್ಯಾಧಾರಿತ ಶಿಕ್ಷಣ ಶಿಬಿರಗಳನ್ನು ನಡೆಸಲು ಆಯೋಜಕರು ಯೋಜಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಂತೇಜಿ ಮನೋರಕ್ಕಿತ ಬಂತೇ ತೇರಾ, ಬಂತೆಜಿ ಸೋಗಥಪಾಲ್,ಬಿಕ್ಕುನೀಗೊತಮಿ, ಸಿ ಎಂ ಕೃಷ್ಣಮೂರ್ತಿ, ಸಾಹಿತಿ ಮಂಜು ಕೊಡಿಉಗನೆ, ಸುಬ್ಬು ಹೊಲೆಯರ್, ಮಾವಳ್ಳಿ ಶಂಕರ್, ನಾಗಶಿಲ್ಪ, ಜಿಲ್ಲಾ ಬೌದ್ಧ ಮಹಾಸಭಾದ ಬಸವರಾಜು, ಕುಮಾರ್ ಚಿಕ್ಕಹೊಳೆ, ದೊಡ್ಡ ಬಸವ, ಸಿದ್ದರಾಜು, ಬಂಗಾರಸ್ವಾಮಿ, ಇತರ ಬುದ್ಧ ಮತ್ತು ಅಂಬೇಡ್ಕರ್ ಅನುಯಾಯಿಗಳು, ಬೌದ್ಧ ಉಪಾಸಕ, ಉಪಾಸಕಿಯರು , ಮಕ್ಕಳು, ಆಯೋಜಕರು, ಭಾಗವಹಿಸಿದ್ದರು.