ಪರಿಶಿಷ್ಟರ ಹಣ ಗ್ಯಾರಂಟಿಗೆ: ಕಾಂಗ್ರೆಸ್ ಸರ್ಕಾರ ಕೋರ್ಟ್‌ಗೆ ಎಳೆಯುತ್ತೇವೆ

| Published : Mar 02 2025, 01:19 AM IST

ಪರಿಶಿಷ್ಟರ ಹಣ ಗ್ಯಾರಂಟಿಗೆ: ಕಾಂಗ್ರೆಸ್ ಸರ್ಕಾರ ಕೋರ್ಟ್‌ಗೆ ಎಳೆಯುತ್ತೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟರ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಸೇರಿ ಇತರೆ ಯೋಜನೆಗಳಿಗೆ ಬಳಕೆ ಮಾಡಿದರೆ ಸರ್ಕಾರವನ್ನು ಕೋರ್ಟ್ ಕಟಕಟೆಗೆ ನಿಲ್ಲಿಸಬೇಕಾಗುತ್ತದೆ.

ಕೊಪ್ಪಳ:

ಪರಿಶಿಷ್ಟರಿಗೆ ಮೀಸಲಿಟ್ಟ ₹ ೨೫,೪೬೨ ಕೋಟಿಯನ್ನು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದೆ. ಈ ಮೂಲಕ ಅವರಿಗೆ ಅನ್ಯಾಯ ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಆರೋಪಿಸಿದರು. ಜತೆಗೆ ಸರ್ಕಾರವನ್ನು ಕೋರ್ಟ್‌ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಸೇರಿ ಇತರೆ ಯೋಜನೆಗಳಿಗೆ ಬಳಕೆ ಮಾಡಿದರೆ ಸರ್ಕಾರವನ್ನು ಕೋರ್ಟ್ ಕಟಕಟೆಗೆ ನಿಲ್ಲಿಸಬೇಕಾಗುತ್ತದೆ. ಕಳೆದ ವರ್ಷ ಎಸ್‌ಸಿಪಿ, ಟಿಎಸ್‌ಪಿಗೆ ₹ ೩೪ ಸಾವಿರ ಕೋಟಿ ಮೀಸಲಿಟ್ಟಿತ್ತು. ಮೊದಲ ವರ್ಷ ₹11,144 ಕೋಟಿ, ೨ನೇ ವರ್ಷ ₹ ೧೪,೨೮೨ ಕೋಟಿ ಬಳಕೆ ಮಾಡಿದೆ. ಒಟ್ಟು ಎರಡು ವರ್ಷದಲ್ಲಿ ಗ್ಯಾರಂಟಿ ಯೋಜನೆಗೆ ಬಳಿಸಿಕೊಳ್ಳುವ ಮೂಲಕ ದಲಿತರಿಗೆ ಮೋಸ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಸಿಪಿ,ಟಿಎಸ್‌ಪಿಗೆ ಮೀಸಲಿಟ್ಟ ₹ 1 ದುರ್ಬಳಕೆ ಮಾಡಿಕೊಂಡರೂ ಸರ್ಕಾರವನ್ನು ಕೋರ್ಟ್‌ ಮೆಟ್ಟಿಲು ಹತ್ತಿಸಲಾಗುವುದು. ಇದೇ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಗೊಳಿಸಿ ಇದೀಗ ಅವರ ಹಣವನ್ನೇ ಗ್ಯಾರಂಟಿಗೆ ಬಳಕೆ ಮಾಡಲಾಗಿದೆ. ಈ ಮೂಲಕ ಕಾಯ್ದೆ ೭ಸಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಪ್ರಶ್ನಿಸಬೇಕಾದ ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿರುವ ಅವರು, ದಲಿತರಿಗೆ ಅನ್ಯಾಯ ಆಗುವುದನ್ನು ನೋಡುತ್ತಾ ಎಲ್ಲರೂ ಕುಳಿತಿದ್ದಾರೆಂದು ಕಿಡಿಕಾರಿದರು.

ನಿಮ್ಮ ಗ್ಯಾರಂಟಿಯೇ ಬೇಡ:

ದಲಿತರ ಹಣವನ್ನು ಗ್ಯಾರಂಟಿಗೆ ಕೊಡುವುದಾದರೆ ನಿಮ್ಮ ಗ್ಯಾರಂಟಿ ಯೋಜನೆಗಳೇ ನಮಗೆ ಬೇಡ. ನಿಮ್ಮ ಗ್ಯಾರಂಟಿ ನೀವೇ ಇಟ್ಟುಕೊಳ್ಳಿ ಎಂದ ಅವರು, ಮುಸ್ಲಿಂರಿಗೆ ಖಜಾನೆಯಿಂದ ಹಣ ಕೊಡುತ್ತೀರಿ. ಆದರೆ, ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಏಕೆ ಬಳಕೆ ಮಾಡುತ್ತೀರಿ ? ಇದರ ವಿರುದ್ಧ ಸದನದ ಒಳಗೂ ಹಾಗೂ ಹೊರಗೂ ಹೋರಾಟ ಮಾಡಲಾಗುವುದು ಎಂದರು.

ಪರಿಶಿಷ್ಟರ ಹಣ ಅನ್ಯ ಕಾರ್ಯಕ್ಕೆ ಬಳಕೆಯಾಗುತ್ತಿದ್ದರು ದಲಿತಪರ ಸಂಘಟನೆಗಳು ಸುಮ್ಮನೆ ಕುಳಿತಿವೆ. ಕಾಂಗ್ರೆಸ್ ಸರ್ಕಾರವು ಅವುಗಳನ್ನು ಹಿಡಿದಿಟ್ಟುಕೊಂಡಿದೆ. ಸಮುದಾಯಕ್ಕೆ ವಂಚನೆ ಆದಾಗ ದಲಿತ ಸಂಘಟನೆಗಳು ಹೋರಾಟ ಮಾಡಬೇಕು ಎಂದರಲ್ಲದೇ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಗ್ಗೆ ಕಾನೂನು ಪ್ರಕಾರ ಎಲ್ಲವೂ ಬರಲಿದೆ. ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಿ, ಪೋಸ್ಟ್‌ಮನ್‌ ಕಳಿಸಿದಂತೆ ಮತ್ತೊಬ್ಬರನ್ನು ಕಳಿಸುವುದು ಬಿಡಲಿ ಎಂದು ಹೇಳಿದರು.