ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದಲ್ಲಿ ಮೊದಲು ಭರ್ತಿಯಾಗುವ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬಾಗಿನ ಅರ್ಪಿಸಿದರು.ಇಷ್ಟು ವರ್ಷ ಕಬಿನಿ ಮತ್ತು ಕೆಆರ್ ಎಸ್ ಜಲಾಶಯಕ್ಕೆ ಒಂದೇ ದಿನ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ, ಕಳೆದ ಜೂನ್ 30 ರಂದು ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ಇದಾದ 20 ದಿನಗಳ ಬಳಿಕ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು.ಕಬಿನಿ ಅಣೆಕಟ್ಟೆಯಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮತ್ತು ಎಚ್.ಡಿ. ಕೋಟೆ ತಾಲೂಕಿನ ಕಿತ್ತೂರ ಗ್ರಾಮದ ರವಿರಾಮೇಶ್ವರ ದೇವಸ್ಥಾನದ ಅರ್ಚಕ ಭಾಸ್ಕರ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಕನ್ಯಾ ಲಗ್ನದಲ್ಲಿ, ಅಭಿಜಿನ್ ಮುಹೂರ್ತದಲ್ಲಿ ಕಾವೇರಿ ಮಾತೆಯನ್ನು ಪೂಜೆ ಮಾಡಿ, ಧಾರ್ಮಿಕ ವಿಧಿ-ವಿಧಾನದ ಅನ್ವಯ ಬಾಗಿನ ಅರ್ಪಣೆ ಕಾರ್ಯ ನೆರವೇರಿತು.ನವಧ್ಯಾನಗಳು, ಅರಿಶಿನ- ಕುಂಕುಮ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳನ್ನು ಒಳಗೊಂಡ ಬಿದಿರಿನ ಮೊರಕ್ಕೆ ಹೂವು ಹಾಕಿ, ಕರ್ಪೂರದ ಆರತಿ ಬೆಳಗಲಾಯಿತು. ಸ್ಥಳೀಯ ಶಕ್ತಿ ದೇವತೆಯಾದ ಚಿಕ್ಕಮ್ಮದೇವಿ ಹಾಗೂ ಆಕೆಯ ಆರು ಮಂದಿ ಸಹೋದರಿಯರ ಕಳಶಕ್ಕೆ ಪೂಜೆ ಮಾಡಿ, ಏಳು ಬಾಗಿನವನ್ನು ಸಿದ್ದಗೊಳಿಸಲಾಯಿತು.ಬಳಿಕ ಬೆಳಗ್ಗೆ 11.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ತದನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಗಿನ ಅರ್ಪಿಸಿದರು. ಇದಾದ ಬಳಿಕ ಜೊತೆಯಾಗಿ ಬಾಗಿನ, ವಿವಿಧ ಹೂವುಗಳನ್ನು ಕಪಿಲೆಯ ಮಡಿಲಿಗೆ ಅರ್ಪಿಸಿದರು. ಇದೇ ವೇಳೆ 32.25 ಕೋಟಿ ರೂ. ವೆಚ್ಚದ ಅಣೆಕಟ್ಟೆ ಪುನಶ್ಚೇತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಐರಾವತ ಬಸ್ಸಿನಲ್ಲಿ ಆಗಮನಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಅಧಿಕಾರಿಗಳು ಐರಾವತ ಬಸ್ಸಿನಲ್ಲಿ ಜೊತೆಯಾಗಿ ಆಗಮಿಸಿದರು. ಕಾರುಗಳು, ವಾಹನಗಳು ಜಲಾಶಯದ ಏರಿ ಮೇಲೆ ಬಂದರೆ ಒತ್ತಡ ಉಂಟಾಗುತ್ತದೆ ಎನ್ನುವ ಕಾರಣದಿಂದ ಬೀಚನಹಳ್ಳಿಯ ಪರಿವೀಕ್ಷಣಾ ಮಂದಿರ (ಐಬಿ) ಬಳಿಯ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಐರಾವತದಲ್ಲಿ ಬಂದು ಬಾಗಿನ ಅರ್ಪಿಸಿ, ಮತ್ತೆ ಅದೇ ಬಸ್ಸಿನಲ್ಲಿ ವಾಪಸ್ ತೆರಳಿದರು. ವಾಹನಗಳನ್ನು ಜಲಾಶಯದ ಮಧ್ಯಕ್ಕೆ ಬಿಡದ ಕಾರಣ ಜನಜಂಗುಳಿ ಇರಲಿಲ್ಲ.ಬಿದರಹಳ್ಳಿ ಕಡೆಯಿಂದ, ಕಪೀಲೇಶ್ವರ ದೇವಸ್ಥಾನದ ಕಡೆಯಿಂದ ಜನರು ಆಗಮಿಸಬಿಡಬಹುದು ಎನ್ನುವ ಕಾರಣದಿಂದ ಅಂತಹ ಆಯಾಕಟ್ಟಿನ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ 2 ಬೋಟ್, ಅರಣ್ಯ ಇಲಾಖೆಯ 3 ಸಫಾರಿ ಬೋಟ್ ಗಳನ್ನು ನಿಯೋಜಿಸಲಾಗಿತ್ತು. ಜಲಾಶಯದಲ್ಲಿ ರಾರಾಜಿಸಿದ ಕನ್ನಡ ಬಾವುಟಕಬಿನಿ ಜಲಾಶಯದ ಪ್ರವೇಶ ದ್ವಾರದಿಂದ ಕೊನೆಯ ಭಾಗದವರೆಗೂ ಕನ್ನಡ ಬಾವುಟ ರಾರಾಜಿಸಿದವು. ಭುವನೇಶ್ವರಿ ದೇವಿಯ ಚಿತ್ರವನ್ನು ಹೊಂದಿದ್ದ ಬಾವುಟದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂಬ ಘೋಷಾ ವಾಕ್ಯಗಳೂ ಬಾವುಟದಲ್ಲಿ ಮುದ್ರಿತವಾಗಿದ್ದವು. ಇದಲ್ಲದೇ ಚೆಂಡು ಮಲ್ಲಿಗೆ ಹೂವಿನ ಹಾರದಿಂದ ಪೂರ್ತಾ ಜಲಾಶಯವನ್ನು ಅಲಂಕರಿಸಲಾಗಿತ್ತು. ಪೂರ್ಣಕುಂಭ ಸ್ವಾಗತ, ಚಂಡೆ ಮೇಳ, ಯಕ್ಷಗಾನ ನೃತ್ಯವು ರಂಗು ಹೆಚ್ಚಿಸಿದ್ದವು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಎ.ಆರ್. ಕೃಷ್ಣಮೂರ್ತಿ, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಮೊದಲಾದವರು ಇದ್ದರು.------ಕೋಟ್...ಕಪಿಲಾ ನದಿಯು ಕಾವೇರಿಯ ಪ್ರಮುಖ ಉಪನದಿಯಾಗಿದ್ದು, 1.13 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ. ಪ್ರತಿ ವರ್ಷದಂತೆ ಜಲಾಶಯ ತುಂಬಿದಾಗ ಬಾಗಿನ ಅರ್ಪಿಸಲಾಗಿದ್ದು, ರೈತರಿಗೆ ಒಳ್ಳೆಯದಾಗಲೆಂದು ಕಪಿಲಾ ಮಾತೆಗೆ ಪ್ರಾರ್ಥಿಸಲಾಗಿದೆ. ಜಲಾಶಯದ ಮುಂಭಾಗದ ಪ್ರದೇಶದಲ್ಲಿ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ, ನಾಲೆಗಳ ಆಧುನೀಕರಣಕ್ಕೂ ಈ ವರ್ಷ ಕ್ರಮ ವಹಿಸಲಾಗುವುದು.- ಸಿದ್ದರಾಮಯ್ಯ, ಮುಖ್ಯಮಂತ್ರಿ----ಕಪಿಲಾ ನದಿಯೂ ನಮಗೆ ಜೀವನದಿಯಾಗಿದೆ. ಸಂಕಷ್ಟ ಕಾಲದಲ್ಲಿ ಕಪಿಲಾ ನದಿ ನಮ್ಮ ಗೌರವ- ಮರ್ಯಾದೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಇದ್ದಾಗ, ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ತೀರ್ಪುಗಳು ಬಂದ ಸಮಯದಲ್ಲಿ ಸೇರಿದಂತೆ ಎಲ್ಲಾ ಸಂಕಷ್ಟ ಕಾಲದಲ್ಲೂ ಕಪಿಲಾ ನದಿಯಿಂದ ನೀರು ಹರಿಸಲಾಗಿದೆ.- ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ