- ಸಮ್ಮೇಳನಾಧ್ಯಕ್ಷೆ ಜಯಮ್ಮ ನೇತೃತ್ವದಲ್ಲಿ ಸಮ್ಮೇಳನ । ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ಅಲಂಕಾರ । ರಾರಾಜಿಸುತ್ತಿವೆ ಬಾವುಟಗಳು । 2 ಸಾವಿರ ಸಾಹಿತ್ಯಾಭಿಮಾನಿಗಳೀಗೆ ಪೆಂಡಾಲ್ ವ್ಯವಸ್ಥೆ

--ಕನ್ನಡಪ್ರಭ ವಾರ್ತೆ, ಬೀರೂರು

ಚಿಕ್ಕಮಗಳೂರು ಜಿಲ್ಲೆಯ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಡೂರಿನಲ್ಲಿ ಇದೇ ಪ್ರಪ್ರಥಮವಾಗಿ ಮೂರು ದಿನಗಳ ಕಾಲ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕಾಗಿ ಭರದ ಸಿದ್ಧತೆ ಅಂತಿಮಗೊಂಡು ಸಾಹಿತ್ಯ ಮತ್ತು ಕನ್ನಡಾ ಭಿಮಾನಿಗಳಿಗೆ ಭವ್ಯ ಸ್ವಾಗತಕೋರಲು ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರ ಸಜ್ಜುಗೊಂಡಿದೆ.

ಕಡೂರಿನ ಜ್ಯೂನಿಯರ್ ಕಾಲೇಜಿನ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 3 ದಿನ ನಡೆಯುವ ಅದ್ಧೂರಿ ಜಿಲ್ಲಾ ಸಮ್ಮೇಳನಕ್ಕೆ ಈಗಾಗಲೇ ಪಟ್ಟಣದ ಪ್ರಮುಖ ರಸ್ತೆಗಳು ಆಕರ್ಷಕ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ. ಬ್ಯಾನರ್‌ಗಳು ರಾರಾಜಿಸುತ್ತಿವೆ. ಕನ್ನಡದ ಬಾವುಟಗಳಿಂದ, ಬಂಟಿಂಗ್ಸ್ ಮತ್ತು ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದು, ಇಡೀ ಪಟ್ಟಣ ವಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಈಗಾಗಲೇ ಸಮ್ಮೇಳನದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಾದ್ವಾರ, ಕಡೂರಿನ ಹಿರಿಮೆ ಹೆಚ್ಚಿಸಿದ ನಾಟ್ಯಪ್ರವೀಣೆ ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮ ಹೆಸರಿನ ಸುಮಾರು 2 ಸಾವಿರ ಜನ ಆಸೀನರಾಗಲು ಪೆಂಡಾಲ್ ವ್ಯವಸ್ಥೆ ಮಹಾ ಮಂಟಪ ನಿರ್ಮಿಸಲಾಗಿದೆ.ಸಮ್ಮೇಳನದ ವೇದಿಕೆಗೆ ಜಿಲ್ಲೆಯ ಹಿರಿಯ ಸಾಹಿತಿ ದಿ. ಅಜ್ಜಂಪುರ ಜಿ.ಸೂರಿ ಹೆಸರು ನಾಮಕರಣ ಮಾಡಲಾಗಿದೆ.


ವಸ್ತು ಪ್ರದರ್ಶನ: ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮತ್ತು ಸಾಹಿತ್ಯಾಸಕ್ತರನ್ನು ಆಕರ್ಷಿಸಲು 50ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ತೆರೆಯಲು ಸಿದ್ಧತೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಊಟೋ ಪಾಚಾರದೊಂದಿಗೆ ಕನ್ನಡಾಭಿ ಮಾನಿಗಳಿಗೆ ಅಗತ್ಯ ಸಿದ್ಧತೆ ಮಾಡಕೊಳ್ಳಲಾಗಿದೆ. ಊಟದ ವ್ಯವಸ್ಥೆಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಅತಿಥಿಗಳ ಸತ್ಕಾರ್ಯಕ್ಕೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟಾದ ಸಮ್ಮೇಳನಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧಗೊಳಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಶ್ರೀ ಚಂದ್ರಮೌಳೇಶ್ವರ ದೇಗುಲದಿಂದ ಚಾಲನೆ: ಏ.10ರ ಶುಕ್ರವಾರ ಬೆಳಿಗ್ಗೆ 8.30ಕ್ಕೆ ತಾಲೂಕು ದಂಡಾಧಿಕಾರಿ ಸಿ.ಎಸ್. ಪೂರ್ಣಿಮಾ ರಾಷ್ಟ್ರ ಧ್ವಜ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪರಿಷತ್ತಿನ ಧ್ವಜ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ನಾಡ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಸಂಜೆ 4ಕ್ಕೆ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇಗುಲದಿಂದ ಕೆಎಲ್ವಿ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ಕ್ರೀಡಾಂಗಣದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

2 ದಿನ, 6 ಗೋಷ್ಠಿಗಳು : ಸಮ್ಮೇಳನದ ಮೊದಲ ದಿನ ಮಧ್ಯಾಹ್ನ 2-4ರವರೆಗೆ ‘ಆಧುನಿಕ ಕೃಷಿ -ನೀರಾವರಿ’ ಗೋಷ್ಠಿಯನ್ನು ಸಂಸ್ಕೃತಿ ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ ಉದ್ಘಾಟಿಸಲಿದ್ದು, ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಮಾಧುಸ್ವಾಮಿ ಬಯಲುಸೀಮೆಗೆ ನೀರಾವರಿ ಸಾಧ್ಯತೆಗಳು, ಡಾ. ಕವಿತಾಮಿಶ್ರ ಅವರು ಕೃಷಿ-ಮಹಿಳೆ, ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಆಹಾರ ಭದ್ರತೆ ಮತ್ತು ಕೃಷಿ ಸಮಸ್ಯೆಗಳು ಕುರಿತ ವಿಚಾರ ಮಂಡಿಸಲಿದ್ದಾರೆ.

ಸಂಜೆ 4- 6 ರವರೆಗೆ ನಡೆಯುವ 2ನೇ ಗೋಷ್ಠಿ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ. ಎ.ಎಸ್. ಶಂಕರನಾರಯಣ ಉದ್ಘಾಟಿಸಲಿದ್ದಾರೆ. 3ನೇ ಗೋಷ್ಠಿ ಸಂಜೆ ಜಿಪಂ ಮಾಜಿ ಸದಸ್ಯ ಶರತ್‌ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಯುವಗೋಷ್ಠಿ ನಡೆಯಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಚ್.ಸಿ. ಲೋಕೇಶ್ ಉದ್ಘಾಟಿಸಲಿದ್ದು, ಯುವ ಕರ್ನಾಟಕ- ಹೊಸತಲೆಮಾರಿನ ಮನಸ್ಥಿತಿ ಕುರಿತಾಗಿ ರೋಹನ್ ಭಾರ್ಗವಪುರಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ರಿಂದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಲರವ ಅನಾವರಣಗೊಳ್ಳಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಉದ್ಘಾಟಿಸಲಿದ್ದಾರೆ. ಸ್ಥಎರಡನೇ ದಿನ ಏ.12ರ ಭಾನುವಾರ ಜಾನಪದ ಗೋಷ್ಠಿ ವೇಳೆ ಯುಗಧರ್ಮ ರಾಮಣ್ಣ ಅವರಿಂದ ಜಾನಪದ ಗೀತಗಾಯನ ನಡೆಯಲಿದೆ. ಸಂಸ್ಕೃತಿ ಚಿಂತಕ ಡಾ. ಜಿ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಜಾಪ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಉದ್ಘಾಟಿಸಲಿದ್ದಾರೆ. 5ನೇ ಗೋಷ್ಠಿ ‘ಧರ್ಮ ಸಾಮರಸ್ಯ ಸಾಹಿತ್ಯ ದೃಷ್ಠಿ’ ಎಂಬ ವಿಚಾರ ಕುರಿತು ನಡೆಯಲಿದ್ದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಸಾಹಿತಿ ಕನ್ನಡಶ್ರೀ ಭಗವಾನ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ವಾಗ್ಮಿ ಚಟ್ನಳ್ಳಿ ಮಹೇಶ್ ಸಾಹಿತ್ಯದ ಕಣ್ಣಲ್ಲಿ ಧರ್ಮದ ಸ್ವರೂಪ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1ರಿಂದ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಜಿಪಂ ಸಿಇಒ ಡಾ. ಎಚ್.ಎಸ್. ಕೀರ್ತನಾ ಭದ್ರಾಬಾಲ್ಯ ಕುರಿತು, ಪೂರ್ಣಿಮಾ ಸ್ತ್ರೀ ಎಂದರೆ ಅಷ್ಟೇ ಸಾಕೇ ವಿಷಯ ಮಂಡಿಸಲಿದ್ದಾರೆ. ಪುರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ ಚಂದ್ರು ಅಧ್ಯಕ್ಷತೆ, ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್ ಉದ್ಘಾಟಿಸ ಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕಸಾಪ ಜಿಲ್ಲಾ ಘಟಕದಿಂದ ಬಹಿರಂಗ ಅಧಿವೇಶನ ನಡೆಯಲಿದೆ. ಜಿಲ್ಲೆಯ ಸಾಧಕರು ಹಾಗೂ ಹಿರಿಯ ಸಾಹಿತಿಗಳಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡುವರು. ಸಮಾರೋಪ ಸಮಾರಂಭದಲ್ಲಿ ಸಂಸದ ಕೋಟಾ ಶ್ರೀನಿವಾಸಪೂಜಾರಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಕೆ.ಎಸ್.ಆನಂದ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ. ದತ್ತ, ಡಾ.ಬಿ.ಎಲ್. ಶಂಕರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಪ್ರಶಸ್ತಿ ಪ್ರದಾನ: ಹಂಪಿ ವಿವಿ ಪ್ರಾಧ್ಯಾಪಕ ಡಾ. ಬಿ.ಎಂ. ಪುಟ್ಟಯ್ಯ, ತರೀಕೆರೆ ಸಾಹಿತಿ ಡಾ. ಗಂಗಾನಾಯ್ಕ್ (ಕರ್ನಾಟಕ ಸಾಹಿತ್ಯಶ್ರೀ ಪ್ರಶಸ್ತಿ ), ಚಿಕ್ಕಮಗಳೂರಿನ ರಮೇಶ್ ಬೊಂಗಾಳೆ, ಸಿಂಗಟಗೆರೆ ಸಿದ್ಪಪ್ಪ, ಪ್ರಿಯದರ್ಶಿನಿ, ಮೇಕನಗದ್ದೆ ಲಕ್ಷ್ಮಣ ಗೌಡ ಮೂಡಿಗೆರೆ (ಸಾಹಿತ್ಯ ಸಿರಿ ಪ್ರಶಸ್ತಿ ), ಕವಿತಾ ಗೋಪಾಲ್, ಇಮ್ರಾನ್ ಅಹಮದ್ ಬೇಗ್, ಶೃಂಗೇರಿ ಸುಬ್ಬಣ್ಣ (ಕನ್ನಡ ಶ್ರೀ ಪ್ರಶಸ್ತಿ , ನಾ.ಸು. ಶಿವಸ್ವಾಮಿ, ಕುಂದೂರು ಅಶೋಕ್ ಸೇರಿದಂತೆ 11 ಜನರಿಗೆ ಕನ್ನಡ-ಕನ್ನಡಿಗ ಸಂಭ್ರಮಿಸುವ ಸಿರಿ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 70 ಜನ ಸಾಧಕರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ದೇಸಿ ಶೈಲಿ ಭೋಜನ: ಏ.10ರ ಶುಕ್ರವಾರ ಸಂಜೆ ಸಮ್ಮೇಳನಾದ್ಯಕ್ಷರ ಮೆರವಣಿಗೆ ಸಂದರ್ಭದಲ್ಲಿ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಉಪಹಾರ, ಸಮ್ಮೇಳನದ ವೇದಿಕೆ ಆವರಣದಲ್ಲಿ ಸಂಜೆ ಪಾಯಸ, ಬಜ್ಜಿ, ಪಲ್ಯ, ಕೋಸುಂಬರಿ, ಅನ್ನಸಾಂಬರ್ ಸಿದ್ದ ಗೊಳ್ಳಲಿದೆ. ಏ.11ರ ಶನಿವಾರ ಬೆಳಿಗ್ಗೆ ಇಡ್ಲಿ ವಡೆ, ತರಕಾರಿ ಪಲಾವ್, ಮಧ್ಯಾಹ್ನ ರಾಗಿ ಕೀಲ್ಸಾ, ಪಾಯಸ, ನಿಪ್ಪಟ್ಟು, ತರಕಾರಿ ಪಲ್ಯ, ಮಜ್ಜಿಗೆ, ಕೋಸುಂಬರಿ, ಅನ್ನಸಾಂಬರ್. ಸಂಜೆ 5ಕ್ಕೆ ಕಾಫೀ, ಟೀ ಹಾಗೂ ಮೆಣಸಿನಕಾಯಿ ಬಜ್ಜಿ, ರಾತ್ರಿ ಪಾಯಸ, ಪಲ್ಯ ಕೋಸುಂಬರಿ ಅನ್ನಸಾಂಬರ್, ಮಜ್ಜಿಗೆ ಉಣಬಡಿಸಲಿದ್ದಾರೆ. ಏ.12ರ ಭಾನುವಾರ ಬೆಳಿಗ್ಗೆ ಉಪ್ಪಿಟ್ಟು-ಕೇಸರಿಬಾತ್ ಉಪಹಾರ, ಮಧ್ಯಾಹ್ನ ಗೋಧಿ ಪಾಯಸ, ಪಲ್ಯ, ಕೋಸುಂಬರಿ, ಅನ್ನಸಾಂಬರ್, ಮೊಸರು, ಸಂಜೆ ಕಾಫಿ ಟೀ ಸ್ನಾಕ್ಸ್ ರಾತ್ರಿ ರಾಗಿ ಕೀಲ್ಸಾ, ಜಿಲೇಬಿ, ಅನ್ನ ಹುರುಳಿಕಟ್ ಸಾಂಬರ್, ಬಜ್ಜಿ, ಕೋಸುಂಬರಿ ದೇಸಿ ಬಗೆಯ ಖಾದ್ಯಗಳ ರುಚಿಯನ್ನು ಸಾವಿರಾರು ಸಾಹಿತ್ಯಪ್ರೇಮಿಗಳು ಸವಿಯಲು ಸಿದ್ದತೆ ನಡೆಯುತ್ತಿವೆ.

-- ಬಾಕ್ಸ್-- ಡಾ. ಬರಗೂರು ರಾಮಚಂದ್ರಪ್ಪರಿಂದ ಸಮ್ಮೇಳನ ಉದ್ಘಾಟನೆ:

ಏ.11ರ ಶನಿವಾರ ಬೆಳಿಗ್ಗೆ 10ಕ್ಕೆ ಖ್ಯಾತ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಎಸ್.ಎಲ್.ಭೋಜೇಗೌಡ, ಜಿ.ಎಚ್.ಶ್ರೀನಿವಾಸ್, ನಯನಾ ಮೋಟಮ್ಮ, 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಂ. ಮರುಳಸಿದ್ದಯ್ಯ ಪಟೇಲ್ ಸೇರಿದಂತೆ ಗಣ್ಯರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

-- ಬಾಕ್ಸ್--

ಸಾಹಿತಿ ಎಂ. ಜಯಮ್ಮ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಪ್ರಥಮ ಅಧ್ಯಕ್ಷೆ :ಕಾಫಿನಾಡಿನ 20 ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಒತ್ತುಕೊಟ್ಟು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿತ್ತು. ಆದರೆ ಕಡೂರು ಪಟ್ಟಣದಲ್ಲಿ ನಡೆಯುತ್ತಿರುವ 21 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಗೆ ಪ್ರಾತಿನಿಧ್ಯ ನೀಡಲಾಗಿದೆ.

ಮೂಲತಃ ಎನ್.ಆರ್.ಪುರ ತಾಲೂಕಿನವರಾದ ಸಾಹಿತಿ ಎಂ. ಜಯಮ್ಮ ಲಕ್ಕವಳ್ಳಿ, ಎನ್.ಆರ್.ಪುರದಲ್ಲಿ ಬಾಲ್ಯ ಶಿಕ್ಷಣ ಮುಗಿಸಿ ತಮ್ಮ 18ನೆ ವಯಸ್ಸಿನಲ್ಲಿ ಮೊಟ್ಟಮೊದಲು ಬರವಣಿಗೆಯಲ್ಲಿ ತೊಡಗಿಸಿಕೊಂಡ ಅವರು ವಾರಪತ್ರಿಕೆಯಲ್ಲಿ ಕಾದಂಬರಿ ಪ್ರಕಟಗೊಂಡ ಬೆನ್ನಲ್ಲೇ ಸಾಹಿತ್ಯ ಲೋಕದ ಒಂದು ಮೈಲಿಗಲ್ಲಾಯಿತು. ಬಿಇಎಡ್ ತರಬೇತಿ ಪಡೆದು 1970ರಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಮಿತ ಭಾಷಿ, ಕೊಂಚ ಸಂಕೋಚದ ಪ್ರವೃತ್ತಿಯ ಎಂ.ಜಯಮ್ಮ ಕಥೆ, ಕಾದಂಬರಿ, ಚರ್ಚೆ, ಚಿತ್ರಕಲೆ, ಎಂಬ್ರಾಯಿಡರಿ, ಟೈಲರಿಂಗ್, ಪೇಪರ್‌ ಕಟಿಂಗ್ ಕೃತಕ ಹೂಗಳ ತಯಾರಿಕೆ, ಕೊಬ್ಬರಿ ಕೆತ್ತನೆ, ಗೊಂಬೆ ತಯಾರಿಕೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು.

ಮಾತೃಭಾಷೆ ತೆಲುಗಾದರೂ ಕನ್ನಡದ ಒಲುಮೆಯಿಂದ ಕನ್ನಡವನ್ನೇ ಉಸಿರಾಗಿಸಿಕೊಂಡು ಬರೆದಂತಹ ರಜನಿ ಎಂಬ ಕಾದಂಬರಿಗೆ ಪ್ರತಿಷ್ಠಿತ ‘ಅತ್ತಿಮಬ್ಬೆ ಪ್ರಶಸ್ತಿ’ ಧರ್ಮದ ಬೇರು ಕಾದಂಬರಿಗೆ ‘ಗೋರೂರು ಪ್ರಶಸ್ತಿ’ ಲಭಿಸಿದೆ. ವಿಧಿ ತಂದವರು ಗಗನ ಕುಸುಮ, ಸಿರಿಯ ಸೆಳೆಯೋ ಒಲವಿನ ಬಲೆಯೋ ಇವೆ ಮೊದಲಾದವು ಇವರ ಪ್ರಮುಖ ಕಾದಂಬರಿಗಳು. ಮಾಟ, ಉಡುಗೊರೆ, ಗೆಳೆತನದ ಗೆಲುವು ಪ್ರಮುಖ ಸಣ್ಣ ಕಥೆಗಳು, ಕಾರ್ಗಿಲ್ಕರೆ, ಸ್ವಯಂಕೃತ ಅಪರಾಧ ಇವರ ಕೃತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ರಾಜ್ಯೋತ್ಸವ ಸೇರಿದಂತೆ ವಿವಿಧ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಅಧ್ಯಕ್ಷರು 1. 1972. ಶೃಂಗೇರಿ. ಎಸ್.ವಿ.ಪರಮೇಶ್ವರ ಭಟ್ಟರು 2. 1993. ಚಿಕ್ಕಮಗಳೂರು ಕೆ.ಆರ್.ಲಿಂಗಪ್ಪ3. 2000. ಬಾಳೇಹೊನ್ನೂರು. ಎ.ಎಸ್. ವೇಣುಗೋಪಾಲ್ 4. 2002. ಚಟ್ನಳ್ಳಿ ಕಡೂರು ತಾಲ್ಲೂಕು ಗೊ.ರು. ಚೆನ್ನಬಸಪ್ಪ5. 2003. ಹೊರನಾಡು- ಸವ್ಯಸಾಚಿ 6. 2004. ಶೃಂಗೇರಿ ಕೆ.ಪಟ್ಟಯ್ಯ7. 2008. ಕುಂದೂರು ಕೊಪ್ಪ ತಾಲ್ಲೂಕು ಎಚ್.ವಿ.ನರಸಿಂಹಮೂರ್ತಿ8. 2008. ತರೀಕೆರೆ. ಡಾ. ಬಿ.ವಿ.ರಾಜಾರಾಂ9. 2011 ಚಿಕ್ಕಮಗಳೂರು. ಡಾ. ಮಂಜಪ್ಪ ಮಸಗಲಿ 10. 2013. ಮೂಡಿಗೆರೆ ಎಚ್.ಎಂ.ನಾಗರಾಜರಾವ್11., 2014. ಬೀರೂರು ಡಾ. ರಹಮತ್ ತರೀಕೆರೆ 12. 2015. ಚಿಕ್ಕಮಗಳೂರು ಸ.ಗಿರಿಜಾಶಂಕರ್13. 2017. ಚಿಕ್ಕಮಗಳೂರು ಡಾ ಕೆ.ಮರುಳಸಿದ್ಧಪ್ಪ14. 2017. ಸಖರಾಯಪಟ್ಟಣ. ಕೆ. ಓಂಕಾರಪ್ಪ 15. 2018. ಮೂಡಿಗೆರೆ. ಡಿ.ಎಸ್.ಜಯಪ್ಪಗೌಡ16. 2020. ಶೃಂಗೇರಿ ಕಲ್ಕುಳಿ ವಿಠಲ ಹೆಗ್ಡೆ 17. 2022. ಅಜ್ಜಂಪುರ. ಡಾ. ರಾಜಪ್ಪ ದಳವಾಯಿ 18. 2023. ಕಳಸ ಚಟ್ನಳ್ಳಿ ಮಹೇಶ್ 19. 2024. ಮೂಡಿಗೆರೆ. ಹಳೇಕೋಟೆ ರಮೇಶ್ 20. 2025. ತರೀಕೆರೆ. ಡಾ. ಎಚ್.ಎಂ.ಮರುಳಸಿದ್ಧಯ್ಯ ಪಟೇಲ್ 21. 2026. ಕಡೂರು. ಎಂ. ಜಯಮ್ಮಬಯಲುಸೀಮೆಯಾದ ಕಡೂರಿನಲ್ಲಿ ಪ್ರಪ್ರಥಮ ಬಾರಿಗೆ ಇಂದಿನಿಂದ ಮೂರು ದಿನಗಳ ಕಾಲ ಸಮ್ಮೇಳನಾಧ್ಯಕ್ಷೆ ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಭರದ ಸಿದ್ದತೆ ಕಾರ್ಯಗಳು ಅಂತಿಮಗೊಂಡು ಜಿಲ್ಲೆಯ ಸಾಹಿತ್ಯಾ ಮತ್ತು ಕನ್ನಾಡಭಿಮಾನಿಗಳಿಗೆ ಭವ್ಯವಾಗಿ ಸ್ವಾಗತಕೋರಲು ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರವು ಸಜ್ಜುಗೊಂಡಿದೆ.

9 ಬೀರೂರು 2ಕಡೂರು ಪಟ್ಟಣದ ಕನ್ನಡಭವನದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಸಮ್ಮೇಳನದ ಅಂತಿಮ ಸಿದ್ದತೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಸೂರಿಶ್ರೀನಿವಾಸ್, ಯರದಕೆರೆ ರಾಜಪ್ಪ, ಆಸಂಧಿಕಲ್ಲೇಶ್, ಚಿಕ್ಕನಲ್ಲೂರು ಪರಮೇಶ್, ಕೃಷ್ಣಸ್ವಾಮಿ, ಕೆ.ಎಚ್. ಮಂಜುನಾಥ್, ಕೆ.ಜಿ.ಲೋಕೇಶ್ವರ್ ಮತ್ತಿತರಿದ್ದರು.