ಸಾರಾಂಶ
ಬೆಂಗಳೂರು : ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಭಾಗೀಯ ಪೀಠವೊಂದು ಕನ್ನಡದಲ್ಲೇ ತೀರ್ಪು ಪ್ರಕಟಿಸುವ ಮೂಲಕ ಹೈಕೋರ್ಟ್‌ನಲ್ಲಿ ಕನ್ನಡಕ್ಕೆ ಆದ್ಯತೆ ದೊರೆಯಬೇಕು, ಕನ್ನಡದಲ್ಲಿಯೇ ತೀರ್ಪು ನೀಡಬೇಕು ಎಂಬ ಬಹುವರ್ಷಗಳ ಕೂಗಿಗೆ ನಾಂದಿ ಹಾಡಿದೆ.
ಭಾರತ ಭಾಷಾ ದಿನದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣವೊಂದರ ತೀರ್ಪನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ಬರೆಸಿದೆ. ಅಲ್ಲದೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ತೀರ್ಪಿನ ಆಪರೇಟಿವ್ (ತೀರ್ಪಿನ ಸಾರಾಂಶದ) ಭಾಗವನ್ನು ಕನ್ನಡದಲ್ಲಿ ಓದುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.
ನ್ಯಾಯಾಲಯದ ತೀರ್ಪುಗಳು ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಆಗದು. ತೀರ್ಪು ನೀಡುವುದಕ್ಕೆ ನಮೂದಿಸಲಾಗಿರುವ ಕಾರಣಗಳು ಅಥವಾ ಅದರಲ್ಲಿ ನಡೆಸಿರುವ ಸಾಂವಿಧಾನಿಕ ನಿಯಮಗಳ ಚರ್ಚೆಗಳನ್ನು ಕನ್ನಡದಲ್ಲಿ ಬರೆಯಲಾಗದಿದ್ದರೂ ಕೊನೇ ಪಕ್ಷ ತೀರ್ಪಿನ ಆಪರೇಟಿವ್ ಭಾಗವನ್ನಾದರೂ ಕನ್ನಡದಲ್ಲಿಯೇ ಬರೆಯಬೇಕು. ಇದರಿಂದ ಸಾಮಾನ್ಯ ಜನರಿಗೆ ಹಾಗೂ ದಾವೆದಾರನಿಗೆ ತೀರ್ಪು ಏನೆಂದು ಅರ್ಥವಾಗುತ್ತದೆ.
ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು ಎಂದು ಈ ವೇಳೆ ನ್ಯಾ.ದೀಕ್ಷಿತ್ ಪ್ರತಿಪಾದಿಸಿದರು.ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ (ವರ್ಸಸ್ ಎಸ್.ಲಿಂಗಣ್ಣ ಮತ್ತು ಇತರರು) ಅವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು (ಒರಿಜನಲ್ ಸೈಡ್ ಅಪೀಲ್) ಪುರಸ್ಕರಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಆ ತೀರ್ಪನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಿದೆ.ಈ ಮಧ್ಯೆ ವಿಭಾಗೀಯ ಪೀಠವನ್ನು ಹಂಚಿಕೊಂಡಿದ್ದ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಸಹ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಆಯಾ ಸ್ಥಳೀಯ ಭಾಷೆಯಲ್ಲಿ ತೀರ್ಪುಗಳನ್ನು ಅನುವಾದ ಮಾಡಬೇಕು ಎಂದು ಹೇಳಿದೆ.
ಅದರಂತೆ ಸುಪ್ರೀಂ ಕೋರ್ಟ್‌ನ 2,400 ತೀರ್ಪುಗಳು ಸದ್ಯ ಕನ್ನಡಕ್ಕೆ (ಹೈಕೋರ್ಟ್) ಅನುವಾದ ಮಾಡಿ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಆ ತೀರ್ಪುಗಳು ಸದ್ಯ ಲಭ್ಯ ಇವೆ. ಇನ್ನು ಕರ್ನಾಟಕ ಹೈಕೋರ್ಟ್‌ನ 1,400ಕ್ಕೂ ಅಧಿಕ ತೀರ್ಪುಗಳು ಕನ್ನಡಕ್ಕೆ ಅನುವಾದ ಮಾಡಲಾಗಿದೆ ಎಂದು ತಿಳಿಸಿದರು.
ಗುರುವಾರ ಬೆಳಗ್ಗೆ 10,30ಕ್ಕೆ ಕಲಾಪ ಆರಂಭವಾದಾಗ ತೀರ್ಪು ಓದುವುದಕ್ಕೂ ಮುನ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಪ್ರತಿಕ್ರಿಯಿಸಿ, ನಾವು ಹೊಸ ಟ್ರೆಂಡ್ ಸೆಟ್ ಮಾಡಲು ನಿರ್ಧರಿಸಿದ್ದೇವೆ. ಈಗ ನಮ್ಮೆಲ್ಲ ತೀರ್ಪುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡುತ್ತಿದ್ದೇವೆ. ಹೀಗೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ? ಎಂಬ ಉದ್ದೇಶದಿಂದ ಕನ್ನಡ ಮತ್ತು ಇಂಗ್ಲೀಷ್ ಎರಡಲ್ಲೂ ನಾವೇ ತೀರ್ಪು ಬರೆದಿದ್ದೇವೆ. ಡಿ.11ರಂದು ಭಾರತ ಭಾಷಾ ದಿನ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವುದೇ ಭಾರತ ಭಾಷಾ ದಿನದ ಉದ್ದೇಶ. ಬುಧವಾರವೇ ತೀರ್ಪು ನೀಡಬೇಕಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಬುಧವಾರ ಹೈಕೋರ್ಟ್‌ಗೆ ರಜೆಯೂ ಇತ್ತು. ಆದ್ದರಿಂದ ಇಂದು ತೀರ್ಪು ಪ್ರಕಟಿಸುತ್ತಿದೇವೆ ಎಂದರು.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನಾವೇ ಎರಡು ಆದೇಶ ಬರೆದಿದ್ದೇವೆ. ಇದು ತರ್ಜುಮೆಯಲ್ಲ. ನಾವೇ ಕನ್ನಡದಲ್ಲಿ ಬರೆದ ಆದೇಶ. ಇಂಗ್ಲೆಂಡ್‌ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ, ಇಂಗ್ಲೆಂಡ್ ನ್ಯಾಯಾಲಯದ ಆದೇಶ/ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಶಾಸನ ರೂಪಿಸಿದ್ದರು. 1730ರಿಂದ ಇಂಗ್ಲೆಂಡ್‌ನಲ್ಲಿ ಇಂದಿನವರಿಗೆ ಆಂಗ್ಲ ಭಾಷೆಯಲ್ಲೇ ಕಲಾಪ ನಡೆಯುತ್ತಿದೆ. ತೀರ್ಪು ಏನೆಂಬುದು ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಹಾಗೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದರು.
ಮುಂದುವರಿದು, ನಮ್ಮಲ್ಲಿ ಕೇಶವಾನಂದ ಭಾರತಿ ತೀರ್ಪು ನಮಗೇ ತಿಳಿಯುವುದಿಲ್ಲ. ಸಂವಿಧಾನದ 348ನೇ ವಿಧಿಯ ಪ್ರಕಾರ ಇಂಗ್ಲಿಷ್ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಭಾಷೆ ಎಂದು ಹೇಳಲಾಗಿದೆ. ಆದರೆ, ಅಲ್ಲಿ ಇಂಗ್ಲಿಷ್ ಮಾತ್ರ ಎಂದು ಹೇಳಿಲ್ಲ. ಸ್ಥಳೀಯ ಭಾಷೆಯಲ್ಲಿ ಹೈಕೋರ್ಟ್ ತೀರ್ಪು ನೀಡಲು ಶಾಸನ ರೂಪಿಸುವುದಾದರೆ 348(1)ನೇ ವಿಧಿಯ ಅಡಿ ಸರ್ಕಾರ ರಾಷ್ಟ್ರಪತಿಗಳಿಂದ ಅನುಮತಿ ಪಡೆದು ರಾಜ್ಯಪಾಲರ ಮೂಲಕ ಕಾನೂನು ಮಾಡಬಹುದು ಎಂದು ಹೇಳಿದೆ.
ಆದರೆ, ಸಂಬಂಧಪಟ್ಟವರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ, ಯಾರೂ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಅವರಿಗಾಗಿ ನಾವು ಕಾಯಲಾಗದು. ಕನ್ನಡದಲ್ಲಿ ತೀರ್ಪು ಬರುವುದು ಆರಂಭವಾಗಬೇಕು. ಅದಕ್ಕಾಗಿ ನಾವು ಆರಂಭಿಸಿದ್ದೇವೆ ಎಂದು ನ್ಯಾ.ದೀಕ್ಷಿತ್ ನುಡಿದರು.ನಂತರ ಮೊದಲಿಗೆ ಸಂವಿಧಾನದಲ್ಲಿ ಹೇಳಿರುವಂತೆ ಇಂಗ್ಲಿಷ್ ಭಾಷೆಯಲ್ಲಿಯೇ ನ್ಯಾ.ದೀಕ್ಷಿತ್ ಅವರು ತೀರ್ಪು ಓದಿದರು.
ಆ ನಂತರ ಕನ್ನಡದಲ್ಲಿ ತೀರ್ಪು ಓದಿದರು. ತೀರ್ಪಿನ ಆಪರೇಟಿವ್ ಭಾಗವಾದ ‘ಮೇಲ್ಕಾಣಿಸಿದ ಕಾರಣಗಳಿಂದಾಗಿ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಪರಿಣಾಮವಾಗಿ ಟಿಒಎಸ್ ಸಂಖ್ಯೆ 1/2023ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚ ಭರಿಸುವಂತಿಲ್ಲ’ ಎಂದು ಓದಿದರು.