ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿಯ ಯಕೃತ್ತು (ಲಿವರ್)ನ್ನು ಇನ್ನೊಬ್ಬ ರೋಗಿಗೆ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಕರಾವಳಿಯಲ್ಲಿ ಸುಧಾರಿತ ಕಸಿ ಆರೈಕೆ ಲಭ್ಯವಾಗುವಂತೆ ಮಾಡುವಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧನೆಯಾಗಿದೆ ಎಂದು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ತಿಳಿಸಿದ್ದಾರೆ.ಯಕೃತ್ತು ಕಸಿ ಮಾಡಿಕೊಡ ಕುಂದಾಪುರ ರೋಗಿ ಅನುಭವ ವ್ಯಕ್ತಪಡಿಸುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 42 ವರ್ಷ ವಯಸ್ಸಿನ ಮೃತರೊಬ್ಬರ ಯಕೃತನ್ನು ಅವರ ಮನೆಯವರು ತಮ್ಮ ದುಃಖದಲ್ಲಿಯೂ ದಾನ ಮಾಡುವ ಮೂಲಕ ಮತ್ತೊಬ್ಬ ರೋಗಿಗೆ ಬದುಕಲು ಹೊಸ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ದೀರ್ಘಕಾಲದ ಯಕೃತ್ ಸಿರೋಸಿಸ್ ಕಾಯಿಲೆಯಿಂದದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಗೆ ಯಕೃತ್ತಿನ ಕಸಿ ಮಾಡುವುದೊಂದೇ ಪರಿಹಾರವಾಗಿತ್ತು. ಅದರಂತೆ ಮೃತ ವ್ಯಕ್ತಿಯಿಂದ ಪಡೆದ ಯಕೃತನ್ನು 2 ತಿಂಗಳ ಹಿಂದೆ ಅವರಿಗೆ ಕಸಿ ಮಾಡಲಾಯಿತು. ಅವರ ಚೇತರಿಕೆ ಸ್ಥಿರವಾಗಿ ಮುಂದುವರಿದು, ಅವರನ್ನು ಸ್ಥಿರ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು. ಇದರೊಂದಿಗೆ, ಮಣಿಪಾಲದಲ್ಲಿ ಕರಾವಳಿ ಕರ್ನಾಟಕದ ರೋಗಿಗಳಿಗೆ ಸುಧಾರಿತ ಕಸಿ ಆರೈಕೆಯು ಲಭ್ಯವಾಗಲಿದೆ ಎಂದರು.ಮಾಹೆ ಮಣಿಪಾಲ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಠಿಪುಡಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಎಚ್‌ಪಿಬಿ - ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ಪ್ಲಾಂಟ್ ಸರ್ಜರಿಯ ಪ್ರಮುಖ ಸಲಹೆಗಾರ ಡಾ. ಜಯಂತ್ ರೆಡ್ಡಿ ನೇತೃತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಡಾ. ಭರತ್ ಕುಮಾರ್ ಭಟ್ ಮತ್ತು ಅವರ ಬಹುಶಿಸ್ತೀಯ ತಂಡವು ವಿಶ್ವದರ್ಜೆಯ ಈ ಶಸ್ತ್ರಚಿಕಿತ್ಸೆ ಸಂಘಟಿತವಾಗಿ ಯಶಸ್ವಿಗೊಳಿಸಿದೆ ಎಂದು ಹೇಳಿದರು.ಡಾ. ಜಯಂತ್ ರೆಡ್ಡಿ ಮಾತನಾಡಿ, ಕರಾವಳಿ ಕರ್ನಾಟಕದ ರೋಗಿಗಳಿಗೆ ಹತ್ತಿರದಲ್ಲಿ ಸುಧಾರಿತ ಲಿವರ್ ಕಸಿ ಆರೈಕೆ ನಾವು ಈಗ ನೀಡಲು ಸಮರ್ಥರಾಗಿದ್ದೇವೆ. ಆದರೆ ಮಣಿಪಾಲ ಆಸ್ಪತ್ರೆಯಲ್ಲಿ ಇನ್ನೂ 8 - 10 ಮಂದಿ ರೋಗಿಗಳು ಯಕೃತ್ತಿನ ಕಸಿಗಾಗಿ ಕಾಯುತಿದ್ದಾರೆ, ಆದ್ದರಿಂದ ಮೃತ ವ್ಯಕ್ತಿಗಳ ಯಕೃತ್ತಿನ ದಾನಕ್ಕೆ ಜನರು ಮುಂದೆ ಬರಬೇಕು ಮತ್ತು ಜೀವದಾನಕ್ಕೆ ನೆರವಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿ ಶಸ್ತ್ರಚಿಕಿತ್ಸೆ ಸಲಹೆಗಾರ ಡಾ. ದೀಪ್ತಿ ರಾಮಚಂದ್ರ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಗ್ಯಾಸ್ಟ್ರೋಎಂಟರಾಲಜಿ ಸರ್ಜರಿ ವಿಭಾಗದ ಪ್ರಾದ್ಯಾಪಕ ಡಾ. ಭರತ್ ಭಟ್ ಇದ್ದರು.