ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನಿಂದ ಆನ್‌ಲೈನ್ ಮೂಲಕ ಸ್ನಾತಕೋತ್ತರ ವ್ಯಾಸಂಗ ಮಾಡಿದ 426 ವಿದ್ಯಾರ್ಥಿಗಳ ಘಟಿಕೋತ್ಸವ ಇದೇ ಮೊದಲ ಬಾರಿಗೆ ನಡೆಸಲಾಯಿತು.ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ಘಟಿಕೋತ್ಸವವನ್ನು ಉದ್ಘಾಟಿಸಿ, ಆನ್‌ಲೈನ್ ಪದವಿಧರರಿಗೆ ಘಟಿಕೋತ್ಸವದ ಮೂಲಕ ಮಾಹೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇದು ಮಾಹೆಯು ಅಂತಾರರಾಷ್ಟ್ರೀಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಲಪಡಿಸುವುದನ್ನು ಮತ್ತು ನಿರ್ವಹಿಸುವುದನ್ನು ಎತ್ತಿ ತೋರಿಸುತ್ತದೆ. ನಾವು ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ಶಿಕ್ಷಣಕ್ಕಿರುವ ಭವಿಷ್ಯವನ್ನು ಎತ್ತಿ ಹಿಡಿಯುತ್ತೇವೆ ಎಂದರು.
ಸಮಾರಂಭದಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಮಾಹೆಯ ಸಹಉಪಕುಲಪತಿಗಳಾದ ಡಾ.ನಾರಾಯಣ ಸಭಾಹಿತ್, ಡಾ. ಶರತ್ ಕೆ ರಾವ್, ಡಾ. ದಿಲೀಪ್ ಜಿ.ನಾಯಕ್, ಡಾ.ಮಧು ವೀರ ರಾಘವನ್, ಕುಲಸಚಿವರಾದ ಡಾ. ಗಿರಿಧರ್ ಪಿ. ಕಿಣಿ ಮತ್ತು ಡಾ ವಿನೋದ್ ವಿ. ಥಾಮಸ್ ಮತ್ತು ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಮನೋಜಕುಮಾರ್ ನಾಗಸಂಪಿಗೆ, ಗೌರವ ಅತಿಥಿಯಾಗಿ ಯುನೆಕ್ಸ್ಟ್ ಲರ್ನಿಂಗ್‌ನ ಸಿಇಒ ಅಂಬ್ರಿಶ್ ಸಿನ್ಹಾ ಅವರು ಉಪಸ್ಥಿತರಿದ್ದರು.ಮಾಹೆಯಲ್ಲಿ ಜಗತ್ತಿನಾದ್ಯಂತ 22 ವಿವಿಧ ದೇಶಗಳ ವಿದ್ಯಾರ್ಥಿಗಳು ಈ ಆನ್‌ಲೈನ್ ತರಗತಿಗಳಲ್ಲಿ ವ್ಯಾಸಂಗ ಮಾಡಿದ್ದು, ಘಟಿಕೋತ್ಸವದಲ್ಲಿ ದಕ್ಷಿಣ ಸುಡಾನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಸ್ವತಃ ಹಾಜರಾಗಿದ್ದು ವಿಶೇಷವಾಗಿತ್ತು.
ಮಾಹೆಯು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ಮಾಸ್ಟರ್ ಆಫ್ ಸೈನ್ಸ್ ಇನ್ ಬಿಸಿನೆಸ್ ಅನಾಲಿಟಿಕ್ಸ್, ಮಾಸ್ಟರ್ ಆಫ್ ಡಾಟಾ ಸೈನ್ಸ್, ಬ್ಯುಸಿನೆಸ್ ಅನಾಲಿಟಿಕ್ಸ್ ಪೋಸ್ಟ್ ಗ್ರಾಜ್ಯುಯೇಟ್ ಸರ್ಟಿಫಿಕೇಟ್ ಮತ್ತು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ ಮೆಂಟ್ ಪೋಸ್ಟ್ ಗ್ರಾಜ್ಯುಯೇಟ್ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆನ್‌ಲೈನ್ ಮೂಲಕ ಒದಗಿಸುತ್ತಿದೆ.ಮಾಹೆಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಲುದಾರಿಕೆಯೊಂದಿಗೆ ಆಫ್ರಿಕನ್ ಯುವಕರಿಗೆ ಉನ್ನತ ಶಿಕ್ಷಣವನ್ನುನೀಡುತ್ತಿದೆ. ಅದರಂತೆ ಸುಮಾರು 204 ಆಫ್ರಿಕನ್ ವಿದ್ಯಾರ್ಥಿಗಳು ಇ-ವಿದ್ಯಾ ಭಾರತಿ ಪ್ಯಾನ್-ಆಫ್ರಿಕನ್ ಸ್ಕಾಲರ್‌ಶಿಪ್ ಪ್ರಾಜೆಕ್ಟ್ ಅಡಿಯಲ್ಲಿ ವ್ಯಾಸಂಗ ಮಾಡಿ ಪದವಿಗಳನ್ನು ಪಡೆದಿದ್ದಾರೆ.
ಮಾಹೆಯು 2022ರಿಂದ ಭೌಗೋಳಿಕ ಗಡಿಗಳನ್ನು ಮೀರಿ ಕಲಿಕೆ ಮತ್ತು ಭವಿಷ್ಯವನ್ನು ರೂಪಿಸುವ ತನ್ನ ಆನ್‌ಲೈನ್ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದು, ಯುಜಿಸಿಯು ಆನ್‌ಲೈನ್ ಪದವಿಯನ್ನು ಕ್ಯಾಂಪಸ್‌ಗಳಲ್ಲಿ ನೀಡಲಾಗುವ ಸಾಂಪ್ರದಾಯಿಕ ಪದವಿಗಳಿಗೆ ಸಮಾನವೆಂದು ಗುರುತಿಸಿದೆ ಮತ್ತು ಈ ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಎಲ್ಲಾ ಉದ್ಯೋಗಾವಕಾಶ ಮತ್ತು ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿವೆ. ಇದು ಆನ್‌ಲೈನ್ ಶಿಕ್ಷಣದ ವಿಶ್ವಾಸಾರ್ಹತೆ ಬಲಪಡಿಸಿದೆ.