ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿವಸತಿ ರಹಿತ ಬಡವರು ಸ್ವಂತ ಸೂರು ಹೊಂದಬೇಕೆಂಬ ಆಶಯದಿಂದ ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ ಪ್ರಧಾನಮಂತ್ರಿ ಆವಾಸ್ (ನಗರ)-ಪಿಎಂಎವೈ ವಸತಿ ಯೋಜನೆಯ ಅನುಷ್ಠಾನ ಗಜಪ್ರಸವದಂತೆ ಸಾಗಿದೆ. ಇದರೊಂದಿಗೆ ಕನಸಿನ ಮನೆ ನಿರ್ಮಿಸಿಕೊಳ್ಳಬೇಕೆಂಬ ಬಡವರ ಹಲವು ವರ್ಷಗಳ ಬಯಕೆ ಗಗನಕುಸುಮವಾದಂತಾಗಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಪಿಎಂಎವೈ ವಸತಿ ಯೋಜನೆಯಡಿ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 665 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿ ಕಳೆದ ನಾಲ್ಕು ತಿಂಗಳು ಹಿಂದೆಯೇ ಗುರಿ ನಿಗದಿಪಡಿಸಿದೆ. ಅದರನ್ವಯ ಈಗಾಗಲೇ 220 ಅರ್ಜಿಗಳು ಸಲ್ಲಿಕೆಯಾಗಿದ್ದು 67 ಜನ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಿದ್ದಾರೆ.ಆದರೆ, ಈವರೆಗೂ ಒಂದೇ ಒಂದು ಮನೆಯ ಫಲಾನುಭವಿಯನ್ನು ಆಯ್ಕೆಗೊಳಿಸಿ ಅಂತಿಮಪಟ್ಟಿ ಸಿದ್ಧಪಡಿಸಲು ಪುರಸಭೆಗೆ ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿನ ಆಡಳಿತ ವ್ಯವಸ್ಥೆಯ ಮತ್ತೊಂದು ಮುಖ ಪರಿಚಯಿಸುತ್ತದೆ. ಹೀಗಾಗಿ ಬಡವರ ಬಾಳಿಗೆ ಆಸರೆಯಾಗಬಲ್ಲ ಈ ಮಹತ್ವದ ಯೋಜನೆಯ ಅನುಷ್ಠಾನ ಆಗದೇ ಇರುವ ಅನುಮಾನ ಮೂಡಿಸಿದೆ. ಇದರೊಂದಿಗೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.ಈ ಮೊದಲು ಪಟ್ಟಣ ವ್ಯಾಪ್ತಿಯಲ್ಲಿ ಸ್ಲಂ ಪ್ರದೇಶವೆಂದು ಘೋಷಿಸಿ 2 ಮತ್ತು 5ನೇ ವಾರ್ಡ್‌ಗಳಿಗೆ ಸೀಮಿತಗೊಳಿಸಿರುವ ಈ ವಸತಿ ಯೋಜನೆಯನ್ನು ಇದೀಗ ಎಲ್ಲ 23 ವಾರ್ಡ್‌ಗಳಿಗೆ ವಿಸ್ತರಿಸಲಾಗಿದೆ. ನಿಗದಿತ ಗುರಿಗಿಂತ ಕಡಿಮೆ ಅರ್ಜಿಗಳು ಬಂದಿದ್ದು ಈ ಪೈಕಿ ಕೆಲವರೇ ವಂತಿಗೆ ಪಾವತಿಸಿದ್ದರೂ ಸಹ ಫಲಾನುಭವಿಗಳ ಆಯ್ಕೆಗೆ ಮೀನಾಮೇಷ ಎಣಿಸುತ್ತಿರುವುದೇಕೆ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಪುರಸಭೆಯ ಆಶ್ರಯ ಸಮಿತಿ ಸಭೆಯಲ್ಲಿ ಈ ಪಿಎಂಎವೈ ವಸತಿ ಯೋಜನೆ ಫಲಾನುಭವಿಗಳು ಆಯ್ಕೆಯಾಗಬೇಕೆಂಬ ನಿಯಮವಿದೆ. ಆದರೆ, ಇದುವರೆಗೆ ಆಶ್ರಯ ಸಮಿತಿ ರಚನೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಆ ವ್ಯಾಪ್ತಿಯ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಅಂತಿಮ ಪಟ್ಟಿ ಸಿದ್ಧಪಡಿಸುವ ಹಕ್ಕು ಹೊಂದಿದ್ದಾರೆ. ಜೊತೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸ್ವತಂತ್ರ ಸಂಸ್ಥೆ ಎನ್ನುವ ಸಾಮಾನ್ಯ ಜ್ಞಾನ ಕೆಲ ಪುರಪಿತೃರಿಗೆ ಇಲ್ಲದಿರುವುದು ದುರ್ದೈವದ ಸಂಗತಿ ಎನಿಸಿದೆ.ಇನ್ನು ತಮ್ಮ ಮೂಗಿನ ನೇರದಲ್ಲೇ ಈ ವಸತಿ ಯೋಜನೆ ಫಲಾನುಭವಿಗಳು ಆಯ್ಕೆಯಾಗಬೇಕೆಂದು ಪುರಸಭೆ ಕೆಲ ಸದಸ್ಯರು ಪಟ್ಟು ಹಿಡಿದಿದ್ದು, ಆಡಳಿತ ಯಂತ್ರವನ್ನು ಹೆಜ್ಜೆ ಹೆಜ್ಜೆಗೂ ನಿಯಂತ್ರಿಸಿ, ನಿರ್ದೇಶಿಸಿ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಮಾತಾಗಿದೆ. ಹಾಗಾಗೀ ಈ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪುರಸಭೆಯ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಕೆಲ ಪುರಪಿತೃರ ಅತಿಯಾದ ಹಸ್ತಕ್ಷೇಪದಿಂದ ಬಡವರ ಕನಸಿನ ಮನೆಗಳ ನಿರ್ಮಾಣಕ್ಕೆ ತಣ್ಣೀರೆರಚಿದಂತಾಗಿದೆ ಎಂಬ ಗಂಭೀರ ಆರೋಪಗಳಿವೆ. ಇನ್ನು ಪುರಸಭೆಯ ಪ್ರತಿ ವಿಚಾರದಲ್ಲೂ ಕೆಲ ಸದಸ್ಯರು ಮೂಗು ತೋರಿಸಿ ತಮ್ಮ ಅಧಿಕಾರ ವ್ಯಾಪ್ತಿಯ ಗಡಿ ಮೀರಿ ವರ್ತಿಸುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇದು ಅಧಿಕಾರಿ ಮತ್ತು ಸಿಬ್ಬಂದಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.ಹುಕ್ಕೇರಿ ಪಟ್ಟಣದ ವಸತಿ ರಹಿತ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಈ ಪಿಎಂಎವೈ ವಸತಿ ಯೋಜನೆ ಮಂಜೂರಾಗಿದೆ. ಶೀಘ್ರವೇ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಸರ್ವರಿಗೂ ಸೂರು ಕಲ್ಪಿಸಲಾಗುವುದು.
ಪ್ರದೀಕ್ ದಳವಾಯಿ, ಎಇಇ ಸ್ಲಂ ಬೋರ್ಡ್ಪಿಎಂಎವೈ ಯೋಜನೆಯ ಪ್ರತಿ ಮನೆ ವೆಚ್ಚ ₹7 ಲಕ್ಷ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯ ಈ ಪಿಎಂಎವೈ ವಸತಿ ಯೋಜನೆಯ ಪ್ರತಿ ಮನೆ ನಿರ್ಮಾಣದ ಘಟಕ ವೆಚ್ಚವನ್ನು ಎಲ್ಲ ವರ್ಗದವರಿಗೆ 7,38,736 ರು. ನಿಗದಿಪಡಿಸಲಾಗಿದೆ. ಇದರಲ್ಲಿ ಫಲಾನುಭವಿ ₹1 ಲಕ್ಷ ವಂತಿಗೆ ಪಾವತಿಸಬೇಕಿದ್ದು ಇನ್ನುಳಿದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಮತ್ತು ಬ್ಯಾಂಕ್ ಲೋನ್ ಒಳಗೊಂಡಿದೆ.