ಕಲ್ಯಾಣ ಮಂಟಪ ಕಾಮಗಾರಿಗೆ ಪುನಃ ಗುದ್ದಲಿ ಪೂಜೆ ಸಲ್ಲದು

| Published : Jun 11 2024, 01:33 AM IST

ಸಾರಾಂಶ

ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ. ಕಡಿಮೆ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಆ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ದೇವರಹಳ್ಳಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿಕೆ । ನೂತನ ಗೋದಾಮು ಉದ್ಘಾಟನೆ

- - - - - -

* ಮಾಜಿ ಶಾಸಕರೇನಂದ್ರು?- ಉಡುಗಿರಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ ಬಳಿ ಸುಸಜ್ಜಿತ ಕಲ್ಯಾಣ ಮಂಟಪಕ್ಕಾಗಿ ₹5 ಕೋಟಿ ಮಂಜೂರು ಮಾಡಿಸಲಾಗಿತ್ತು

- ಈಗಿರುವ ಶಾಸಕರು ಇನ್ನೊಂದು ವರ್ಷದಲ್ಲಿ ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಳಿಸಿ, ಅವರೇ ಉದ್ಘಾಟನೆಗೊಳಿಸಲಿ

- ತರಕಾರಿ ರೈತರಿಗೆ ಅನುಕೂಲವಾಗುವಂಥ ಕೋಲ್ಡ್ ಸ್ಟೋರೇಜ್ ಉದ್ಘಾಟನೆ ಶೀಘ್ರವೇ ನೆರವೇರಬೇಕು

- - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ. ಕಡಿಮೆ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಆ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ದೇವರಹಳ್ಳಿಯಲ್ಲಿ ಸೋಮವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಗ್ರಾಮದ ಸಹಕಾರ ಸಂಘವು ಅತಿ ಹೆಚ್ಚು ರೈತರಿಗೆ ಸಾಲ ಸೌಲಭ್ಯ ನೀಡಿರುವುದು ಶ್ಲಾಘನೀಯ ಎಂದರು.

ಶಾಸಕನಾಗಿದ್ದಾಗ ಗ್ರಾಮದ ಇತಿಹಾಸ ಪ್ರಸಿದ್ಧ ಉಡುಗಿರಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ ಬಳಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲು ₹5 ಕೋಟಿ ಮಂಜೂರು ಮಾಡಿಸಿ, ಗುದ್ದಲಿ ಪೂಜೆ ನೆರವೇರಿಸಿದ್ದೆ. ಆದರೆ, ಈ ಕೆಲಸ ಇನ್ನು ಪ್ರಾರಂಭಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ ಇನ್ನೊಮ್ಮೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಈಗಿರುವ ಶಾಸಕರು ಇನ್ನೊಂದು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ, ಅವರೇ ಉದ್ಘಾಟನೆಗೊಳಿಸಲಿ. ಆದರೆ ಪುನಃ ಗುದ್ದಲಿಪೂಜೆ ಮಾಡುವುದು ಸರಿಯಲ್ಲ ಎಂದರು.

ತಾಲೂಕಿನ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ₹28 ಕೋಟಿ ವೆಚ್ಚದಲ್ಲಿ ಚನ್ನಗಿರಿ ಪಟ್ಟಣದಲ್ಲಿ 220 ಹಾಸಿಗೆಗಳ ಆಸ್ಪತ್ರೆ ಮತ್ತು ಯುಜಿಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ದೇವರಹಳ್ಳಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಕಾಮಗಾರಿ ಕೆಲಸ ಮಾತ್ರ ನಡೆಯುತ್ತಿಲ್ಲ. ಶಾಸಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ಈ ಭಾಗದಲ್ಲಿ ಹೆಚ್ಚಿನ ರೈತರು ತರಕಾರಿಗಳನ್ನು ಬೆಳೆಯುತ್ತಾರೆ. ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್ ಸೌಲಭ್ಯಕ್ಕಾಗಿ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ನಡೆಸಲಾಗಿದ್ದು, ಮುಕ್ತಾಯದ ಹಂತದಲ್ಲಿದೆ. ಆದಷ್ಟು ಶೀಘ್ರದಲ್ಲಿಯೇ ಕೋಲ್ಡ್ ಸ್ಟೋರೇಜ್ ಉದ್ಘಾಟಿಸಬೇಕು ಎಂದರು.

ಈ ಸಂದರ್ಭ ತಾ.ಪಂ. ಮಾಜಿ ಅಧ್ಯಕ್ಷ ಎ.ಎಸ್. ಬಸವರಾಜಪ್ಪ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ, ಸಹಕಾರ ಸಂಘದ ಅಧ್ಯಕ್ಷ ಡಿ.ಎಚ್. ತ್ಯಾರಪ್ಪ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್.ಸ್ವಾಮಿ, ಗ್ರಾಪಂ ಅಧ್ಯಕ್ಷೆ ಲಕ್ಕಮ್ಮ, ಜಿ.ಜಿ.ರಾಮಣ್ಣ, ಡಿ.ಆರ್. ರಾಜಪ್ಪ, ಎ.ಆರ್. ರಂಗನಾಥ್, ಎಂ.ಜಿ. ಕೆ.ಮಂಜಪ್ಪ, ಸಿ.ಆರ್. ನೀಲಪ್ಪ, ಬಿ.ಎಚ್. ಬಿಲ್ಲಪ್ಪ, ವಿಜಯಮ್ಮ, ಗ್ರಾಪಂ ಸದಸ್ಯ ರಾಕೇಶ್, ಗ್ರಾಮಸ್ಥರು ಹಾಜರಿದ್ದರು.

- - - -10ಕೆಸಿಎನ್‌ಜಿ1:

ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿದರು.