ಸಾರಾಂಶ
ಕುಷ್ಟಗಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಕುಷ್ಟಗಿ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ತಹಸೀಲ್ದಾರ್ ಹಾಗೂ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ ಮಾತನಾಡಿ, ರಾಜ್ಯದ ಎಲ್ಲ ಕಂದಾಯ ಜಿಲ್ಲೆ, ಶೈಕ್ಷಣಿಕ ಜಿಲ್ಲೆ, ಹಾಗೂ ಅನೇಕ ತಾಲೂಕುಗಳಲ್ಲಿ ಸಂಘ ಶಾಖೆ ಹೊಂದಿದೆ. ಸಮಸ್ತ 6 ಲಕ್ಷ ರಾಜ್ಯ ಸರ್ಕಾರ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆ ಆಗಿದೆ. ಸಂಘವು ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕ ಪ್ರವಾಹ. ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ, ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದೆ ಎಂದರು.ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದೆ. ಆದರೂ ಸರ್ಕಾರವು ಜನಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜತೆಗೆ ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬೇಡಿಕೆಗಳು: ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಒಪಿಎಸ್ ಜಾರಿ ಮಾಡಬೇಕು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಬೇಕು ಎಂದು ಮನವಿ ಸಲ್ಲಿಸಿದರು.ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ ವಾಗ್ಮೋರೆ, ಶ್ರೀನಿವಾಸ್ ನಾಯಕ, ಮಲ್ಲಪ್ಪ ಕುದರಿ, ಹೈದರ್ ಅಲಿ ಜಾಲಿಹಾಳ, ರುದ್ರೇಶ ಬೂದಿಹಾಳ, ಬಸಟ್ಟೆಪ್ಪ, ನಿಂಗಪ್ಪ ಗುನ್ನಾಳ, ಲಕ್ಷ್ಮಣ ಪೂಜಾರಿ, ಸಂತೋಷ್ ಸಿ.ಕೆ., ಗುರಪ್ಪ ಕುರಿ, ಅಲ್ತಾಫ್ ಹುಸೇನ, ಕಳಕಮಲೇಶ ಬೋಗಿ, ನಾಗರಾಜ್ ಶೆಟ್ಟರ್, ಪಂಪಾಪತಿ ಕೊರ್ಲಿ, ನೀಲನಗೌಡ ಇದ್ದರು.