ಅಂಗಡಿ ಮಳಿಗೆ ತೆರವುಗೊಳಿಸದಂತೆ ಒತ್ತಾಯ

| Published : Jan 28 2025, 12:48 AM IST

ಸಾರಾಂಶ

ಹಾರೋಹಳ್ಳಿ: ಪಟ್ಟಣ ಅಭಿವೃದ್ಧಿಯ ಹೆಸರಿನಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ತಂದು ನೂರಾರು ಕುಟುಂಬಗಳು ಜೀವಿಸುತ್ತಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವುದರಿಂದ ನಮ್ಮ ಬದುಕು ಬೀದಿ ಪಾಲಾಗಲಿದೆ ಎಂದು ಹಾರೋಹಳ್ಳಿ ಮುಖ್ಯರಸ್ತೆಯ ಪಂಚಾಯತಿ ಅಂಗಡಿ ಮಾಲೀಕರು ನೋವು ತೋಡಿಕೊಂಡರು.

ಹಾರೋಹಳ್ಳಿ: ಪಟ್ಟಣ ಅಭಿವೃದ್ಧಿಯ ಹೆಸರಿನಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ತಂದು ನೂರಾರು ಕುಟುಂಬಗಳು ಜೀವಿಸುತ್ತಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವುದರಿಂದ ನಮ್ಮ ಬದುಕು ಬೀದಿ ಪಾಲಾಗಲಿದೆ ಎಂದು ಹಾರೋಹಳ್ಳಿ ಮುಖ್ಯರಸ್ತೆಯ ಪಂಚಾಯತಿ ಅಂಗಡಿ ಮಾಲೀಕರು ನೋವು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾಪಾರಸ್ಥರು, ಅಭಿವೃದ್ಧಿಯ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ ಅನ್ಯಾಯ ಮಾಡಬೇಡಿ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು. ಹತ್ತಾರು ವರ್ಷಗಳಿಂದ 251 ಅಂಗಡಿ ಮಳಿಗೆಗಳಲ್ಲಿ ಜೀವನ ಸಾಗಿಸಿಕೊಂಡು ಬರುತ್ತಿದ್ದೇವೆ. ಈಗ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಕಚೇರಿ ಸಂಕೀರ್ಣ ಮಾಡಲು ಹೊರಟಿದೆ, ಇದರಿಂದ ನೂರಾರು ಕುಟುಂಬಗಳು ಬೀದಿ ಪಾಲಾಗಲಿವೆ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳಿಗೆ ಕೆಲವರು ಮೀಸಲಾತಿ ಆಧಾರದ ಮೇಲೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಆಡಳಿತ ಇದನ್ನೇ ನಂಬಿ ಜೀವಿಸುತ್ತಿರುವ ನಮ್ಮ ಮೇಲೆ ಬರೆ ಎಳೆಯದೆ ಮೀಸಲಾತಿ ಆಧಾರದ ಮೇಲೆ ಮತ್ತುಷ್ಟು ಹೆಚ್ಚುವರಿ ಮಳಿಗೆಗಳನ್ನು ನಿರ್ಮಾಣ ಮಾಡಿ ಹಂಚಬೇಕು. ಈಗಾಗಲೇ ಬೈಪಾಸ್ ರಸ್ತೆ ನಿರ್ಮಿಸುತ್ತಿರುವುದರಿಂದ ತೀರ ಅನಿವಾರ್ಯ ಎನಿಸಿದರೆ ಮಾತ್ರ ನಗರದ ಒಳಗಿನ ರಸ್ತೆಗಳನ್ನು ಅಗಲೀಕರಣ ಮಾಡಿ ಸಾಧ್ಯವಾದರೆ ಅಂಗಡಿಗಳನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು.

ಅಭಿವೃದ್ಧಿ ಹೆಸರನಲ್ಲಿ ವ್ಯಾಪಾರಸ್ಥರ ಬದುಕನ್ನು ನಾಶ ಮಾಡಿದಂತಾಗುತ್ತದೆ, ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾನೂನು ಜಾರಿ ಮಾಡಬಾರದು, ಈಗಾಗಲೇ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು. ಪ್ರಯೋಜನವಾಗಿಲ್ಲ, ನಮ್ಮ ಜೀವನಕ್ಕೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಒದಗಿಸುವುದು ಪಟ್ಟಣ ಪಂಚಾಯಿತಿ ಹಾಗೂ ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಸದಸ್ಯ ಸುಧಾಕರ್, ಬೇಕರಿ ಮುನಿಕೃಷ್ಣ, ವರ್ತಕರಾದ ವೆಂಕಟೇಶ್, ಶರತ್, ರಸುಲ್ಲಾ, ಚಿಕ್ಕಮರಿಯಪ್ಪ ಸೇರಿದಂತೆ ಹತ್ತಾರು ಅಂಗಡಿ ಮಾಲೀಕರು ಹಾಜರಿದ್ದರು.

27ಕೆಆರ್ ಎಂಎನ್ 2.ಜೆಪಿಜಿ

ಹಾರೋಹಳ್ಳಿ ಪಪಂ ಅಂಗಡಿ ಮಳಿಗೆಯ ವ್ಯಾಪಾರಸ್ಥರಿಗೆ ಕಿರುಕುಳ ನೀಡದಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿಯಲ್ಲಿ ಸುಧಾಕರ್, ಮುನಿಕೃಷ್ಣ, ವೆಂಕಟೇಶ್, ಶರತ್, ರಸುಲ್ಲಾ ಮಾತನಾಡಿದರು.