ವಸತಿ ಶಾಲೆಯ ಪ್ರವೇಶಾತಿಯಲ್ಲಿ ಅಲಿಖಿತ ನಿಯಮ ಕೈಬಿಡಲು ಒತ್ತಾಯ

| Published : Jul 17 2024, 12:56 AM IST

ವಸತಿ ಶಾಲೆಯ ಪ್ರವೇಶಾತಿಯಲ್ಲಿ ಅಲಿಖಿತ ನಿಯಮ ಕೈಬಿಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಶಾಲೆಯಲ್ಲಿ ಸ್ವಕ್ಷೇತ್ರದ ವಿದ್ಯಾರ್ಥಿಗಳಿಗೆ ಶೇ.75 ಪ್ರವೇಶಾತಿ ಹಾಗೂ ಅನ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಕೇವಲ ಶೇ. 25 ಪ್ರವೇಶಾತಿ ಕೊಡಬೇಕು ಎಂದು ಜಾರಿಗೆ ತರುತ್ತಿರುವ ಅಲಿಖಿತ ನಿಯಮವನ್ನು ಸರ್ಕಾರ ಹಿಂಪಡೆಯಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ತಮ್ಮ ಅಧಿಕಾರದ ಮೂಲಕವಾಗಿ ವಸತಿ ಶಾಲೆಯಲ್ಲಿ ಸ್ವಕ್ಷೇತ್ರದ ವಿದ್ಯಾರ್ಥಿಗಳಿಗೆ ಶೇ.75 ಪ್ರವೇಶಾತಿ ಹಾಗೂ ಅನ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಕೇವಲ ಶೇ. 25 ಪ್ರವೇಶಾತಿ ಕೊಡಬೇಕು ಎಂದು ಜಾರಿಗೆ ತರುತ್ತಿರುವ ಅಲಿಖಿತ ನಿಯಮವನ್ನು ಸರ್ಕಾರ ಹಿಂಪಡೆಯಬೇಕು ಎಂದು ಹೈದ್ರಾಬಾದ್ ಕರ್ನಾಟಕ ಯುವ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಗೇರ ಒತ್ತಾಯಿಸಿದರು.

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರ ಈ ಅಲಿಖಿತ ನಿಯಮವನ್ನು ಜಾರಿಗೆ ತರಬಾರದು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಸಚಿವ ಶಿವರಾಜ ತಂಗಡಗಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಂಡು ಮೊದಲಿನಂತೆ ಮೆರಿಟ್ ಆಧಾರದ ಮೇಲೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಬೇಕು ಎಂದರು.

ಸದ್ಯ ಆರಂಭವಾಗುತ್ತಿರುವ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲು ಸೂಕ್ತವೇ, ಅಲ್ಲಿಯ ಕಾರ್ಯಕರ್ತೆಯರು ಅರ್ಹರೇ, ಅಲ್ಲಿರುವ ಕಟ್ಟಡಗಳು ಸಾಕಾಗುತ್ತವೆಯೇ ಎಂದು ಸರ್ಕಾರ ಅರಿತುಕೊಂಡು ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.

ರಾಜ್ಯಾದ್ಯಂತ ಅನಧಿಕೃತ ಕೋಚಿಂಗ್ ಸೆಂಟರ್‌ಗಳಿವೆ. ಆದರೆ ಕೇವಲ ಕುಷ್ಟಗಿ ತಾಲೂಕಿನಲ್ಲಿ ಮಾತ್ರ ಬಂದ್ ಮಾಡಿಸಲಾಗಿದ್ದು, ಅಧಿಕಾರಿಗಳ ನಡೆ ಅನುಮಾನ ಉಂಟು ಮಾಡಿದೆ. ಇತ್ತೀಚೆಗೆ ತಾಲೂಕಿನ 27 ಕೋಚಿಂಗ್ ಸೆಂಟರ್ ಗಳನ್ನು ಅನಧಿಕೃತವಾಗಿವೆ ಎಂದು ಮುಚ್ಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ವಿದ್ಯಾವಂತ ನಿರುದ್ಯೋಗಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋಚಿಂಗ್ ಸೆಂಟರ್ ಪುನಃ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದರು.ಸರ್ಕಾರಿ ಶಾಲೆಯ ಮಕ್ಕಳು ಕೋಚಿಂಗ್ ಕೇಂದ್ರಗಳಲ್ಲಿ ಇದ್ದರೆ ಅಥವಾ ಶಿಕ್ಷಕರು ನಡೆಸುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೋಚಿಂಗ್ ಕೇಂದ್ರಗಳಲ್ಲಿ ಹೆಚ್ಚಿನ ಶುಲ್ಕ ಪಡೆಯುತ್ತಿರುವುದು ಕಂಡು ಬಂದರೆ ಕಡಿವಾಣ ಹಾಕಬೇಕು. ಕೋಚಿಂಗ್ ಸೆಂಟರ್ ಗಳು ಶುಲ್ಕದ ನಾಮಫಲಕ ಹಾಕುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಕಿರಣಜ್ಯೋತಿ ಇದ್ದರು.