ರಾಜ್ಯ ಹೆದ್ದಾರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳರ ವೃತ್ತ ನಿರ್ಮಿಸಲು ಒತ್ತಾಯ, ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಮನವಿ, ಹಕ್ಕುಪತ್ರ, ಗೃಹಲಕ್ಷ್ಮಿ ಹಣಕ್ಕಾಗಿ ಸಾರ್ವಜನಿಕರ ಮೊರೆ ಇವು ಶನಿವಾರ ನಗರದ ಎಪಿಎಂಸಿ ರೈತ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಲ್ಲಿಕೆಯಾದ ಅರ್ಜಿಗಳು.

ರಾಣಿಬೆನ್ನೂರು: ರಾಜ್ಯ ಹೆದ್ದಾರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳರ ವೃತ್ತ ನಿರ್ಮಿಸಲು ಒತ್ತಾಯ, ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಮನವಿ, ಹಕ್ಕುಪತ್ರ, ಗೃಹಲಕ್ಷ್ಮಿ ಹಣಕ್ಕಾಗಿ ಸಾರ್ವಜನಿಕರ ಮೊರೆ ಇವು ಶನಿವಾರ ನಗರದ ಎಪಿಎಂಸಿ ರೈತ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಲ್ಲಿಕೆಯಾದ ಅರ್ಜಿಗಳು.

ವೃತ್ತ ನಿರ್ಮಿಸಲು ಒತ್ತಾಯ: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಪ್ರಾರಂಭಿಸುತ್ತಿದ್ದಂತೆಯೇ ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ ಹೆಸರಿನಲ್ಲಿ ಹೊನ್ನಾಳಿ ಗದಗ ರಾಜ್ಯ ಹೆದ್ದಾರಿಯಲ್ಲಿ ವೃತ್ತ ನಿರ್ಮಿಸುವಂತೆ ಕಳೆದ ವರ್ಷ ಮನವಿ ಸಲ್ಲಿಸಲಾಗಿತ್ತು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣ ಬಲಿಗೈದ ತಾಲೂಕಿನ ಏಕೈಕ ವ್ಯಕ್ತಿ ಇವರಾಗಿದ್ದರೂ ತಾಲೂಕು ಹಾಗೂ ಜಿಲ್ಲಾಡಳಿತ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎರಡೂವರೆ ವರ್ಷ ಕಳೆದರೂ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದರು. ಇದು ಸಚಿವ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಅವರಿಗೆ ತೀವ್ರ ಮುಜುಗರ ಉಂಟು ಮಾಡಿತು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪ್ರಜಾಸೇವಾ ಆಂದೋಲನದಲ್ಲಿ ಇದನ್ನು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ ಎಂದರು. ಆದರೆ ಇದರಿಂದ ಸಮಾಧಾನಗೊಳ್ಳದ ಗುತ್ತಿಗೆದಾರರು ನಾವು ಕೆಲಸ ಮಾಡಿ ಎರಡೂವರೆ ವರ್ಷಗಳಾಗಿವೆ. ಆದರೂ ಇದುವರೆಗೂ ಹಣ ಬಿಡುಗಡೆಯಾಗದ ಕಾರಣ ನಿಮ್ಮ ಮುಂದೆ ಅಳಲು ತೊಡಿಕೊಂಡಿರುವೆ ಎಂದರು.

ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ, ವಿದ್ಯುತ್ ಕಂಬಗಳಿದ್ದರೂ ದೀಪಗಳಿಲ್ಲ, ಆಶ್ರಮ ಸಮಿತಿ ಮನೆಗಳ ಹಕ್ಕು ಪರಭಾರೆ ಮಾಡುವ ಕುರಿತು ನಿವಾಸಿಗಳಾದ ನಂದೀಶ ಕೋರಿಶೆಟ್ಟರ, ರಮೇಶ ಜಾಧವ ಹಾಗೂ ಮಾಲತೇಶ ಅಂತರವಳ್ಳಿ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ನಗರಸಭೆ ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ ಮಾತನಾಡಿ, ಆದಷ್ಟು ಶೀಘ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಹಾಲಿನ ದರದ ವಿಚಾರ: ಕೆಎಂಎಫ್ ಅಧಿಕಾರಿಗಳಿಗೆ ತರಾಟೆ

ಪ್ರಜಾಸೇವಾದಲ್ಲಿ ರೈತರೊಬ್ಬರು ಹಾಲು ಉತ್ಪಾದಕರಿಗೆ ಘೋಷಣೆಯಾದ ಹೆಚ್ಚುವರಿ ಪ್ರೋತ್ಸಾಹಧನ ಸಮರ್ಪಕವಾಗಿ ದೊರೆಯುತ್ತಿಲ್ಲ. ಸರ್ಕಾರ ಹಾಲಿನ ದರ ರು.7ಗೆ ಹೆಚ್ಚಿಸಿ ಅದರಲ್ಲಿ ರು.6 ರೈತರಿಗೆ ನೀಡುವಂತೆ ಆದೇಶ ಮಾಡಿದೆ. ಆದರೇ ಕಳೆದ ಆರು ತಿಂಗಳಿಂದ ಹಳೇ ದರದಲ್ಲಿ ಸರಿಯಾಗಿ ಪೋತ್ಸಾಧನ ನೀಡುತ್ತಿಲ್ಲ/ ಉತ್ಪಾದಕರಿಗೆ ಕೆಎಂಎಫ್ ಅನ್ಯಾಯ ಮಾಡುತ್ತಿದೆ ಎಂದು ಸಚಿವ ರುದ್ರಪ್ಪ ಲಮಾಣಿ ಎದುರಿನಲ್ಲಿಯೇ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಕೆಎಂಎಫ್ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರಲ್ಲದೆ ಹಾಲಿನ ದರದ ಸಮಸ್ಯೆ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಎರಡು ವರ್ಷದಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ:

ಯಕಲಾಸಪುರ ಗ್ರಾಮದ ಗೀತಾ ಈಳಗೇರ ಹಾಗೂ ಈರಮ್ಮ ಜಾನಗೇರಿ ಎಂಬ ಮಹಿಳೆಯರು ಕಳೆದ ಎರಡು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮನೆ, ಜಮೀನು ಇಲ್ಲ. ಜಿಎಸ್‌ಟಿ ನೋಂದಣಿಯೂ ಇಲ್ಲ. ಆದರೂ ಯೋಜನೆಯ ಹಣ ದೊರೆಯುತ್ತಿಲ್ಲ. ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದೇವೆ. ನಮಗೆ ನ್ಯಾಯ ಒದಗಿಸಬೇಕು. ನಮಗೆ ಯಾರು ಹಣ ನೀಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾಧಿಕಾರಿ ಈ ಸಮಸ್ಯೆ ರಾಜ್ಯದಲ್ಲಿಯೇ ಆಗಿದೆ, ಈ ಕುರಿತು ಕ್ರಮವಹಿಸಲಾಗುವುದು ಎಂದರು ಉತ್ತರಿಸಿದರು.

ಇಂದಿನ ಸಭೆಯಲ್ಲಿ ಮೆಡ್ಲೇರಿ ಹೋಬಳಿ ವ್ಯಾಪ್ತಿಯ ಸರ್ಕಾರಿ ಜಮೀನುಗಳ ಹದ್ದು ಬಸ್ತು ಮಾಡುವುದು, ನಗರದ ವಿವಿಧ ಲೇಔಟ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ, ನಗರದ ಪೂರ್ವ ಮತ್ತು ಪಶ್ಚಿಮ ಬಡಾವಣೆ ಮಾಲೀಕತ್ವ ವಿಚಾರಕ್ಕೆ ಪರಿಹಾರ, ಮಾರುತಿ ನಗರದ 312 ಸರ್ವೆ ನಂಬರ್ ಹಕ್ಕು ಪತ್ರ ಸಮಸ್ಯೆ ಕುರಿತು ಅರ್ಜಿಗಳನ್ನು ಸಲ್ಲಿಸಲಾಯಿತು.