ಸಾರಾಂಶ
- ಜೆಸ್ಕಾಂ ಇಇ ಕಚೇರಿ ಮುಂದೆ ರೈತ ಸಂಘದ ಮುಖಂಡರಿಂದ ಪ್ರತಿಭಟನೆ
------ಕನ್ನಡಪ್ರಭ ವಾರ್ತೆ ಯಾದಗಿರಿ
ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ದ ಯಾದಗಿರಿ ಜಿಲ್ಲಾಧ್ಯಕ್ಷ ಎಚ್.ಆರ್. ಬಡಿಗೇರ ಅವರ ನೇತೃತ್ವದಲ್ಲಿ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಿಂದ ಮೆರವಣಿಗೆ ಮೂಲಕ ಜೆಸ್ಕಾಂ ಎಂಜಿನೀಯರ್ ಕಚೇರಿ ತಲುಪಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಎಚ್.ಆರ್. ಬಡಿಗೇರ್ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ, ಆರ್.ಆರ್. ನಂಬರ್‌ಗೆ ಆಧಾರ್ ಕಾರ್ಡ್ ನಂಬರ್ ಜೋಡಣೆ ಮಾಡುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುವಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ಸೆ. 22 ರಿಂದ ಟಿ.ಸಿ., ವಿದ್ಯುತ್ ಕಂಬಗಳು, ವೈರ್‌ಗಳು, ಇತರೆ ಸಾಮಾಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕರಾಳ ಕಾನೂನು ಜಾರಿಗೊಳಿಸಿದೆ. ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ 2000ರ ಇಸ್ವಿಯಲ್ಲಿ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರದ ನೀತಿಗಳ ವಿರುದ್ಧ 2001ರಲ್ಲಿ ಹೋರಾಟದ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ರೈತರಿಗೆ ಉಚಿತ ವಿದ್ಯುತ್ ಪಡೆಯಲಾಯಿತು.
ರಾಜ್ಯದಲ್ಲಿ ರೈತರ ಕೊಳವೆ ಬಾವಿಗಳ ಆಶ್ರಯದಲ್ಲಿ ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಿ ಕಾನೂನು ಬದ್ಧಗೊಳಿಸುವವರೆಗೂ ಕೃಷಿ ಕ್ಷೇತ್ರಕ್ಕೆ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಬೇಕಾಗಿರುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಬೇಕು ಹಾಗೂ ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಪರಸನಹಳ್ಳಿ ಮಾತನಾಡಿದರು. ರೈತ ಸಂಘದ ಚೆನ್ನಾರಡ್ಡಿ ಪಾಟೀಲ್ ಗುರುಸುಣಿಗಿ, ಸಿದ್ದರಾಮ ತಳ್ಳಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬೇಬಿ ಎ. ರಾಠೋಡ, ಯಮನಪ್ಪಗೌಡ ಕುಂಬಾರ, ಧರ್ಮಣ್ಣ ಮಳ್ಳಿಕೇರಿ, ಮಹಿಬೂಬ ದಪ್ಪೆದಾರ, ಶಿವು ಮಾಳಿಕೇರಿ, ಮಲ್ಲು ತುಂಬಗಿ, ಗುರಪ್ಪ ಕುಂಬಾರ, ಶಿವಲಿಂಗಯ್ಯ ಸ್ವಾಮಿ, ಬಸವರಾಜ ಬುದೂರ, ವಿಕ್ರಮ್ ಪರಸನಳ್ಳಿ, ಸಾಯಿಬಣ್ಣ ವಜ್ಜಲ್, ಮುದುಕಣ್ಣ ವಜ್ಜಲ್, ಕಕ್ಕೇರಾ ಹೋಬಳಿ ಅಧ್ಯಕ್ಷ ಗೋವಿಂದ ಪತ್ತಾರ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.
-----8ವೈಡಿಆರ್22: ಯಾದಗಿರಿಯಲ್ಲಿ ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ದ ಯಾದಗಿರಿ ಜಿಲ್ಲಾಧ್ಯಕ್ಷ ಎಚ್.ಆರ್. ಬಡಿಗೇರ ಅವರ ನೇತೃತ್ವದಲ್ಲಿ ನಗರದ ಜೆಸ್ಕಾಂ ಇಇ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
------