ಸೋಲಾರ್‌ ಪ್ಲಾಂಟ್‌ ಅಳವಡಿಕೆಗೆ ಕಡಿವಾಣ ಹಾಕಲು ಒತ್ತಾಯ

| Published : Oct 29 2024, 12:48 AM IST

ಸೋಲಾರ್‌ ಪ್ಲಾಂಟ್‌ ಅಳವಡಿಕೆಗೆ ಕಡಿವಾಣ ಹಾಕಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸೋಲಾರ್ ಘಟಕವನ್ನು ಅಳವಡಿಸಲು ಒಂದೇ ಕಡೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ.

ಕೊಟ್ಟೂರು: ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ವಿರುದ್ಧ ಆಕ್ಷೇಪಿಸಿ ರೈತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಕೊಟ್ಟೂರು ತಹಶೀಲ್ದಾರ್‌ ಅಮರೇಶ್ ಜಿ.ಕೆ. ಅವರಿಗೆ ಮನವಿ ಸಲ್ಲಿಸಿ, ಅಕ್ರಮವಾಗಿ ಅಳವಡಿಸಲಾಗುತ್ತಿರುವ ಸೋಲಾರ್‌ ಪ್ಲಾಂಟ್‌ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಸೋಲಾರ್ ಘಟಕವನ್ನು ಅಳವಡಿಸಲು ಒಂದೇ ಕಡೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಹಾಗಾಗಿ ಸೂಕ್ತವೆನಿಸುವ ಜಮೀನು ಪಡೆಯಲು ಕಂಪನಿಯವರು ಅನೇಕ ಮಾರ್ಗಗಳನ್ನು ಮಧ್ಯವರ್ತಿಗಳ ಮೂಲಕ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಟನೆಯವರು, ಅಧಿಕೃತವಾಗಿ ಹೊಲ ನೀಡುವ ರೈತನಿಂದ ಪಡೆದ ಜಮೀನಿನ ಪಕ್ಕದ ರೈತನಿಗೆ ಗೊತ್ತಿಲ್ಲದಂತೆ ಕೆಲವರ ಹೊಲದಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಪ್ಲಾಂಟ್‌ಗಳನ್ನು ಅಳವಡಿಸುತ್ತಿದ್ದಾರೆ ಎಂದು ದೂರಿದರು.

ಕೃಷಿ ಯೋಗ್ಯವಾದ ಜಮೀನುಗಳನ್ನು ರೈತರಿಂದ ಕಡಿಮೆ ದರದಲ್ಲಿ ಪಡೆದು ರೈತರ ಜಮೀನುಗಳನ್ನು ಪವರ್ ಆಟಾರ್ನಿ ಮೂಲಕ ೩೦ವರ್ಷಕ್ಕಿಂದ ಹೆಚ್ಚು ಲೀಜ್ ಪಡೆದುಕೊಂಡಿದ್ದರು. ಕಂಪನಿಯವರು ರೈತರ ಜಮೀನುಗಳನ್ನು ನೋಂದಾಯಿಸುವುದಕ್ಕಿಂದ ಮೊದಲೇ ಪ್ಲಾಂಟ್ ಅಳವಡಿಸುವ ಕಾರ್ಯ ಚಟುವಟಿಕೆ ಕೈಗೊಂಡಿದ್ದಾರೆ. ಕಾಯಿದೆ ನಿಯಮಗಳಿಗೆ ವಿರುದ್ಧವಾಗಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳನ್ನು ಪಡೆಯುವುದನ್ನು ಬಿಟ್ಟು ಯೋಗ್ಯವಾದ ಜಮೀನನ್ನು ಪಡೆದು ರೈತರಿಗೆ ವಂಚಿಸುತ್ತಿದ್ದಾರೆ. ಇಂತಹವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಪಟ್ಟಣದ ಸಮೀಪ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬದುವಿನ ಒಂದು ಕಡೆಯಿಂದ ಜಮೀನಿನ ಒಳಗೆ ನಾಲ್ಕೈದು ಸೋಲಾರ್ ತಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಫಲವತ್ತಾದ ಕಪ್ಪುಮಣ್ಣಿನ ಭೂಮಿ ಹೊಂದಿರುವ ರೈತರ ಜಮೀನುಗಳನ್ನು ಪವರ್ ಸೋಲಾರ್ ಕಂಪನಿಯೊಂದು ವಿವಿಧ ಮಾರ್ಗಗಳ ಮೂಲಕ ರೈತರ ಮನವೊಲಿಸಿ ವರ್ಷಾನುಗಟ್ಟಲೇ ನೂರಾರು ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಅವಳವಡಿಸಿದ್ದಾರೆ. ಇದರ ಬೆನ್ನಲ್ಲೇ ಸೋಲಾರ್ ಕಂಪನಿಗಳು ಸಹ ಇಲ್ಲಿಗೆ ಲಗ್ಗೆ ಇಡುತ್ತಿವೆ.

ಈಗಾಗಲೇ ಹೋಬಳಿಯ ರಾಂಪುರ, ಜೋಳದ ಕೂಡ್ಲಿಗಿ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಸೋಲಾರ್ ಕಂಪನಿ ಚಟುವಟಿಕೆಗಳು ಗರಿಗೆದರಿವೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ದುಷ್ಪರಿಣಾಮ ಉಂಟಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಲಾರ್ ಪ್ಲಾಂಟ್‌ಗೆ ಜಮೀನು ಪಡೆಯುವ ಕಂಪನಿಯವರು ಹೊಲದ ಒಂದು ಭಾಗದಲ್ಲಿ ಘಟಕ ಸ್ಥಾಪನೆ ಮಾಡುತ್ತಾರೆ. ನಂತರ ತಟ್ಟೆಗಳ ಅಳತೆಗೆ ತಕ್ಕಂತೆ ಭೂಮಿಯಯಲ್ಲಿ ಗುಂಡಿಗಳನ್ನು ತೋಡುತ್ತಾರೆ. ಅಲ್ಲಿ ಕಾಂಕ್ರಿಟ್ ಹಾಕಿ ಕಬ್ಬಿಣದ ಕಂಬಗಳನ್ನು ಜೋಡಿಸಿ ತಟ್ಟೆಗಳನ್ನು ಅಳವಡಿಸುತ್ತಾರೆ. ನಂತರ ಆ ಹೊಲದ ಸುತ್ತಲೂ ಕಾಂಪೌಂಡ್ ಹಾಕುತ್ತಾರೆ. ಇದರಿಂದಾಗಿ ಸಂಪೂರ್ಣವಾಗಿ ಕೃಷಿ ಮುಕ್ತ ಹೊಲವಾಗಿ ಪರಿವರ್ತನೆಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಡ್ಡಾಯವಾಗಿ ಕರ್ನಾಟಕದಲ್ಲಿ ಸರ್ಕಾರದ ಆದೇಶದ ಪ್ರಕಾರ ಶೇ.೬೦ ಕನ್ನಡ ಕಡ್ಡಾಯವಾಗಿ ನೋಂದಣಿ ಪತ್ರ ಇರಬೇಕು. ಆದರೆ ಕಂಪನಿಯವರು ಆಂಗ್ಲ ಭಾಷೆಯಲ್ಲಿ ಪತ್ರವನ್ನು ತಯಾರಿಸಿ ರೈತರಿಗೆ ಅರ್ಥವಾಗದ ರೀತಿಯಲ್ಲಿ ನೋಂದಾಯಿಸಿರುತ್ತಾರೆ. ಇಂತಹ ಅಧಿಕಾರಿಗಳಿಗೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.

ರೈತರು ಜಮೀನಿಗೆ ಲೀಜ್ ಮಾಡಿಕೊಳ್ಳಲು ಪ್ರತಿ ವರ್ಷಕ್ಕೆ ₹೩೨ಸಾವಿರ ಬದಲಾಗಿ ₹೧ ಲಕ್ಷ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ ೩೦ ವರ್ಷಗಳ ಅವಧಿಗೆ ಎಕರೆಗೆ ಪ್ರತಿ ರೈತನಿಗೂ ₹೩೦ ಲಕ್ಷ ರೈತರ ಖಾತೆ ಎಫ್‌ಡಿ ಮಾಡಬೇಕು. ಅದರಿಂದ ಬರುವ ಬಡ್ಡಿ ಹಣವನ್ನು ರೈತರೇ ಬಳಸಿಕೊಳ್ಳಬೇಕು ಎಂದರು.

ಪಹಣಿಯಲ್ಲಿ ರೈತರ ಹೆಸರು ಬದಲಾವಣೆಯಾಗದಂತೆ ಕೇವಲ ಲೀಜ್ ಆಗ್ರಿಮೆಂಟ್ ಮಾತ್ರ ಮಾಡಿಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್‌.ಭರಮಣ್ಣ, ಡಿ.ಎಸ್‌ಎಸ್‌ ಮುಖಂಡ ಹನುಮಂತಪ್ಪ ಟಿ.ಮತ್ತಿತತರು ಇದ್ದರು.