ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿನಿ ಸವಿತಾ ಅವರು ಬಡತನದಿಂದ ಎಂಬಿಬಿಎಸ್ ಓದು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಆರ್ಥಿಕ ಸಹಾಯ ಅಗತ್ಯವಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: “ನನ್ನಿಂದ ಮಗಳನ್ನು ಓದಿಸಲು ಸಾಧ್ಯವೇ ಇಲ್ಲ. ಆಕೆ ಓದಿ ಡಾಕ್ಟರ್ ಆಗಬಹುದು. ಆದರೆ, ಅಷ್ಟೊಂದು ಶುಲ್ಕ ಪಾವತಿಸಲು ನಮ್ಮಿಂದ ಆಗುವುದಿಲ್ಲ. ಧೈರ್ಯ ಮಾಡಿ ಪ್ರವೇಶ ಕೊಡಿಸಿದ್ದೆವು, ಈಗ ಖರ್ಚು ಭರಿಸಲಾಗದೆ ವಾಪಸ್ ಕರೆಸಿಕೊಂಡಿದ್ದೇವೆ...”ಇದು ತಾಲೂಕಿನ ವದಗನಾಳ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿನಿ ಸವಿತಾ ಅವರ ತಂದೆ ಶರಣಪ್ಪ ಅವರ ನೋವಿನ ಮಾತು. ಮಗಳು ವೈದ್ಯೆಯಾಗಬೇಕು ಎಂಬ ಕನಸು ನನಸಾಗುವ ಹೊತ್ತಿಗೆ ಬಡತನ ಅಡ್ಡಗೋಡೆಯಾಗಿ ನಿಂತಿದೆ. ಪ್ರತಿಭೆ, ಪರಿಶ್ರಮದಿಂದ ವೈದ್ಯಕೀಯ ಸೀಟು ಪಡೆದರೂ, ಶುಲ್ಕ ಪಾವತಿಸಲಾಗದೆ ಓದು ಮುಂದುವರಿಸಲಾಗದ ಸಂಕಷ್ಟಕ್ಕೆ ಈ ಕುಟುಂಬ ಸಿಲುಕಿದೆ.
ಅಂಕಗಳಲ್ಲಿ ಸಾಧನೆ: ಸವಿತಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿಯೇ ಪೂರೈಸಿದ್ದಾರೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 94ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ 481 ಅಂಕಗಳನ್ನು ಪಡೆದು, ಮೈಸೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.ಮಗಳು ವೈದ್ಯೆಯಾಗುವ ಅವಕಾಶ ಪಡೆದಿದ್ದಾಳೆ ಎಂಬ ಸಂತಸ ಶರಣಪ್ಪ ಕುಟುಂಬದಲ್ಲಿತ್ತು. ಆದರೆ, ಆ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ವೈದ್ಯಕೀಯ ಶಿಕ್ಷಣದ ಶುಲ್ಕ ಹಾಗೂ ಇತರ ಖರ್ಚುಗಳನ್ನು ಭರಿಸುವುದು ಹೇಗೆ ಎಂಬ ಚಿಂತೆ ಕುಟುಂಬವನ್ನು ಕಾಡತೊಡಗಿತು.
ಕೂಲಿಯೇ ಆಧಾರ: ಶರಣಪ್ಪ ಕುಟುಂಬಕ್ಕೆ ಇರುವುದು ಕೇವಲ ಒಂದು ಎಕರೆ ಜಮೀನು. ಸವಿತಾ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಕೃಷಿಯಿಂದ ಸಾಕಷ್ಟು ಆದಾಯವಿಲ್ಲದ ಕಾರಣ ಕೂಲಿ ಕೆಲಸ ಮಾಡಿಯೇ ಕುಟುಂಬ ನಿರ್ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಗಳ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸುವುದು ಅಸಾಧ್ಯವಾಗಿದೆ.ವೈದ್ಯಕೀಯ ಸೀಟು ಕೈತಪ್ಪಬಾರದು ಎಂಬ ಕಾರಣಕ್ಕೆ ಸಾಲ ಮಾಡಿ, ಪರಿಚಯಸ್ಥರ ಬಳಿ ಹಣ ಹೊಂದಿಸಿ ಮಗಳನ್ನು ಕಾಲೇಜಿಗೆ ಸೇರಿಸಿದ್ದರು. ಆದರೆ, ಪ್ರತಿ ವರ್ಷ ₹2.11 ಲಕ್ಷದಂತೆ ಒಟ್ಟು ₹9.91 ಲಕ್ಷ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಕುಟುಂಬಕ್ಕೆ ದೊಡ್ಡ ಹೊರೆಯಾಗಿದೆ. ಹಣ ಹೊಂದಿಸಲು ಸಾಧ್ಯವಾಗದೆ ಕೊನೆಗೆ ಸವಿತಾಳನ್ನು ಕಾಲೇಜಿನಿಂದ ವಾಪಸ್ ಕರೆಸಿಕೊಂಡಿದ್ದಾರೆ.
ಗ್ರಾಮಸ್ಥರ ನೆರವಿನಿಂದ: ವೈದ್ಯಕೀಯ ಸೀಟು ಪಡೆದಿದ್ದ ಸವಿತಾ ಮನೆಯಲ್ಲೇ ಉಳಿದಿರುವುದನ್ನು ಕಂಡ ಗ್ರಾಮಸ್ಥರು, ಆಕೆಯ ವಿದ್ಯಾಭ್ಯಾಸ ಮುಂದುವರಿಸುವಂತೆ ಕುಟುಂಬಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಆರ್ಥಿಕ ಸಂಕಷ್ಟದ ಮುಂದೆ ಕುಟುಂಬ ಅಸಹಾಯಕವಾಗಿತ್ತು. ಇದೇ ವೇಳೆ ಕಾಲೇಜಿನಿಂದಲೂ ವಿದ್ಯಾರ್ಥಿನಿಯನ್ನು ಮರಳಿ ಕಳುಹಿಸುವಂತೆ ಕರೆಗಳು ಬರುತ್ತಿದ್ದವು.ಈ ಸಂದರ್ಭದಲ್ಲಿ ಗ್ರಾಮದ ಬಸವರಾಜ ಉಂಡಿ ಅವರು ಸವಿತಾ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಸ್ನೇಹಿತರು ಹಾಗೂ ಗ್ರಾಮಸ್ಥರ ನೆರವು ಪಡೆದು ಅಗತ್ಯ ಹಣ ಹೊಂದಿಸಿ ಸವಿತಾಳನ್ನು ಮತ್ತೆ ಕಾಲೇಜಿಗೆ ಕಳುಹಿಸಿದ್ದಾರೆ. ಆದರೆ, ಈ ನೆರವು ಸದ್ಯದ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರವಷ್ಟೇ ಆಗಿದೆ. ಮುಂದಿನ ವರ್ಷಗಳ ಶುಲ್ಕ ಹಾಗೂ ಇತರ ವೆಚ್ಚಗಳನ್ನು ಭರಿಸುವುದು ಹೇಗೆ ಎಂಬ ಚಿಂತೆ ಕುಟುಂಬವನ್ನು ಕಾಡುತ್ತಿದೆ.
ನೆರವಿನ ಅಗತ್ಯ: ಬಡತನದ ನಡುವೆಯೂ ಪ್ರತಿಭೆ ಮತ್ತು ಪರಿಶ್ರಮದಿಂದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಸವಿತಾ ಅವರ ಓದು ಮುಂದುವರಿಯಲು ಆರ್ಥಿಕ ನೆರವಿನ ಅಗತ್ಯವಿದೆ. ಗ್ರಾಮಸ್ಥರ ಸಹಾಯದಿಂದ ಮತ್ತೆ ಕಾಲೇಜಿಗೆ ತೆರಳಿರುವ ಆಕೆಯ ಶಿಕ್ಷಣಕ್ಕೆ ನಿರಂತರ ನೆರವು ದೊರೆತರೆ ವೈದ್ಯೆಯಾಗುವ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಲಿದೆ.ಸವಿತಾಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಇಚ್ಛಿಸುವವರು 8088071013 (ಶರಣಪ್ಪ) ಸಂಪರ್ಕಿಸಬಹುದು.
ಚಿಂತೆ ಇದೆ: ಮಗಳಿಗೆ ವೈದ್ಯಕೀಯ ಸೀಟು ಸಿಕ್ಕಿದ್ದು ಸಂತೋಷದ ಸಂಗತಿ. ಆದರೆ, ಅಷ್ಟೊಂದು ಹಣ ಖರ್ಚು ಮಾಡಿ ಓದಿಸಲು ಸಾಧ್ಯವಾಗದೆ ವಾಪಸ್ ಕರೆಸಿಕೊಂಡಿದ್ದೆ. ಈಗ ಊರಿನವರು ಸಹಾಯ ಮಾಡಿ ಮತ್ತೆ ಕಾಲೇಜಿಗೆ ಕಳುಹಿಸಿದ್ದಾರೆ. ಮುಂದೇನು ಮಾಡಬೇಕು ಎಂಬ ಚಿಂತೆ ಇದೆ ಎಂದು ಸವಿತಾ ಅವರ ತಂದೆ ಶರಣಪ್ಪ ಹೇಳಿದರು.ಆತಂಕವಿದೆ: ಅತ್ಯಂತ ಬಡತನದಲ್ಲಿರುವ ಸವಿತಾ ವೈದ್ಯಕೀಯ ಸೀಟು ಪಡೆದಿದ್ದರೂ ಶುಲ್ಕ ಪಾವತಿಸಲಾಗದೆ ಮನೆಗೆ ಮರಳಿದ್ದಳು. ಸ್ನೇಹಿತರು ಹಾಗೂ ಗ್ರಾಮಸ್ಥರು ಸೇರಿ ಹಣಕಾಸಿನ ನೆರವು ನೀಡಿ ಮತ್ತೆ ಕಾಲೇಜಿಗೆ ಕಳುಹಿಸಿದ್ದೇವೆ. ಆದರೆ, ನಿರಂತರ ಆರ್ಥಿಕ ನೆರವು ಸಿಗದಿದ್ದರೆ ಕುಟುಂಬ ಮತ್ತೆ ಆಕೆಯನ್ನು ವಾಪಸ್ ಕರೆಸಿಕೊಳ್ಳುವ ಆತಂಕವಿದೆ ಎಂದು ಗ್ರಾಮಸ್ಥ ಬಸವರಾಜ ಉಂಡಿ ಹೇಳಿದರು.