ಸೇತುವೆ ಅಗಲೀಕರಣಕ್ಕೆ ಆದೇಶಪತ್ರ ನೀಡಲು ಒತ್ತಾಯ

| Published : Sep 18 2024, 01:51 AM IST

ಸಾರಾಂಶ

ಜಿಲ್ಲಾಡಳಿತ ಕೂಡಲೇ ಕಾಮಗಾರಿ ಆರಂಭಿಸುವ ಕುರಿತು ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಲಾಯಿತು.

ಬಳ್ಳಾರಿ: ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಬಳಿಯ ಒಳ ಸೇತುವೆ ಅಗಲೀಕರಣ ಕಾಮಗಾರಿಯನ್ನು ಸೇತುವೆಯ ಯಾವ ಕಡೆಯಿಂದ ಆರಂಭಿಸಬೇಕು ಎಂಬುದರ ಕುರಿತು ರೈಲ್ವೆ ಅಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡುವಂತೆ ಒತ್ತಾಯಿಸಿ ಯುವಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ಪದಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು.

ಒಳ ಸೇತುವೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಈ ಹಿಂದಿನ ಜಿಲ್ಲಾಧಿಕಾರಿಗಳ ಆದೇಶದನ್ವಯ 2022ರ ನವೆಂಬರ್ 17ರಂದು ಅಂದಿನ ನಗರ ಶಾಸಕರು, ಸಚಿವರು ಹಾಗೂ ಬುಡಾ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆದು ಪ್ರಾಧಿಕಾರದಿಂದ ₹8,84,12,616 ಮೊತ್ತವನ್ನು ಡಿ.ಡಿ. ಮೂಲಕ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಒಳಸೇತುವೆ ಅಗಲೀಕರಣ ಕಾಮಗಾರಿಯನ್ನು ಸೇತುವೆಯ ಯಾವ ಕಡೆಯಿಂದ ಆರಂಭಿಸಬೇಕು ಎಂಬುದರ ಕುರಿತು ಆದೇಶ ಪತ್ರವನ್ನು ರೈಲ್ವೆ ಅಧಿಕಾರಿಗಳಿಗೆ ನೀಡಿಲ್ಲ. ಹೀಗಾಗಿಯೇ ಒಳ ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ಈ ಕುರಿತು ಹುಬ್ಬಳ್ಳಿಯ ಡಿವಿಜನ್‌ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದಾಗ, ಈ ಹಿಂದೆ ರಾಮ್‌ಪ್ರಸಾದ್ ಮನೋಹರ್ ಅವರು ಜಿಲ್ಲಾಧಿಕಾರಿಗಳಾಗಿದ್ದ ಅಗಲೀಕರಣ ಚರ್ಚೆ ನಡೆದಿದ್ದು, ಬಳಿಕ 2022ರ ನವೆಂಬರ್‌ನಲ್ಲಿ ರೈಲ್ವೆ ಇಲಾಖೆಗೆ ಹಣ ಕೂಡ ಪಾವತಿಯಾಗಿದೆ. ಆದರೆ, ಯಾವ ಕಡೆಯಿಂದ ಕೆಲಸ ಆರಂಭಿಸಬೇಕು ಎಂಬುದರ ಕುರಿತು ತಿಳಿಸಿಲ್ಲ. ಅಂದಿನಿಂದ ಇಂದಿನ ವರೆಗೆ ಯಾವ ಜಿಲ್ಲಾಧಿಕಾರಿಗಳೂ ಈ ಬಗ್ಗೆ ಚರ್ಚಿಸಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಸ್ಥಳ ನಿಗದಿಗೊಳಿಸಿ ಆದೇಶ ಪತ್ರ ನೀಡಿದ ಕೂಡಲೇ ಕೆಲಸ ಆರಂಭಿಸಲು ಗುತ್ತಿಗೆದಾರರು ಸಿದ್ಧರಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಕಾಮಗಾರಿ ಆರಂಭಿಸುವ ಕುರಿತು ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ಅಧ್ಯಕ್ಷ ಮೇಕಲ ಈಶ್ವರ ರೆಡ್ಡಿ, ಪದಾಧಿಕಾರಿಗಳಾದ ಎಸ್.ಕೃಷ್ಣ, ಜಿ.ಎಂ. ಬಾಷಾ, ಪಿ. ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ, ಎಂ. ಶ್ರೀನಿವಾಸರೆಡ್ಡಿ, ಎಂ.ಕೆ. ಜಗನ್ನಾಥ, ಪಿ. ನಾರಾಯಣ, ಕೆ. ವೆಂಕಟೇಶ, ಎಂ. ಅಭಿಷೇಕ್ ಇತರರಿದ್ದರು.