ಗಾಂಧೀಜಿ ಚಿತಾಭಸ್ಮ ಬಿಟ್ಟ ಪಶ್ಚಿಮವಾಹಿನಿ ನದಿ ತೀರ ಸ್ಮಾರಕವನ್ನಾಗಿಸಲು ಒತ್ತಾಯ

| Published : Oct 03 2024, 01:24 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಬಿಟ್ಟ ಸ್ಥಳವನ್ನು ಪುರಸಭೆ ಹಾಗೂ ಸರ್ಕಾರ ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿದೆ. ಈ ಹಿಂದೆ ಶಾಸಕರು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸ್ಥಳ ಅಭಿವೃದ್ಧಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಹಾತ್ಮ ಗಾಂಧಿ ಅವರ ಚಿತಾಭಸ್ಮ ಬಿಟ್ಟ ಪಶ್ಚಿಮವಾಹಿನಿ ನದಿ ತೀರವನ್ನು ಸರ್ಕಾರ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಒತ್ತಾಯಿಸಿದರು.

ಪಟ್ಟಣ ಹೊರವಲಯದ ಪಶ್ಚಿಮವಾಹಿನಿಯ ಕಾವೇರಿ ನದಿ ಬಳಿ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧಿ ಚಿತ್ತಭಸ್ಮ ಬಿಟ್ಟ ಸ್ಥಳ ಸ್ವಚ್ಛತಾ ಶಿಬಿರದಲ್ಲಿ ಪಾಲ್ಗೊಂಡು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಬಿಟ್ಟ ಸ್ಥಳವನ್ನು ಪುರಸಭೆ ಹಾಗೂ ಸರ್ಕಾರ ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿದೆ. ಈ ಹಿಂದೆ ಶಾಸಕರು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸ್ಥಳ ಅಭಿವೃದ್ಧಿಯಾಗಿಲ್ಲ ಎಂದು ಕಿಡಿಕಾರಿದರು.

ದೇಶ, ವಿದೇಶಗಳಿಂದ ಅಸ್ತಿ ವಿಸರ್ಜನೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳನ್ನು ನಡೆಸಲು ಜನರು ಬರುತ್ತಾರೆ. ಇಲ್ಲಿ ಸ್ವಚ್ಛತೆ ಇಲ್ಲದೆ ತ್ಯಾಜ್ಯ ವಸ್ತುಗಳಿಂದ ನದಿ ಅಶುದ್ಧಗೊಳ್ಳುತ್ತಿದೆ. ಸುತ್ತಲು ಪ್ಲಾಸ್ಟಿಕ್ ಪೇಪರ್, ಪೂಜಾ ಸಾಮಗ್ರಿಗಳ ತ್ಯಾಜ್ಯ, ಕಸ ಕಟ್ಟಿಗಳಿಂದ ಕೊಳೆತು ನಾರುತ್ತಿದೆ. ಕೂಡಲೇ ಸಂಬಂಧಪಟ್ಟ ಸ್ಥಳೀಯ ಪುರಸಭೆ ಅಧಿಕಾರಿಗಳು ಈ ಸ್ಥಳವನ್ನು ಪ್ರತಿ ದಿನ ಸ್ವಚ್ಛ ಮಾಡಿ ಅಭಿವೃದ್ಧಿ ಪಡಿಸಿಬೇಕು ಎಂದು ಆಗ್ರಹಿಸಿದರು.

ಒಂದು ತಾಸಿಗೂ ಹೆಚ್ಚು ಕಾಲ ಸದಸ್ಯರು ಜೊತೆಗೂಡಿ ಶ್ರಮದಾನ ನಡೆಸಿ ನದಿತಟದಲ್ಲಿ ಬಿದ್ದಿದ್ದ ಬಟ್ಟೆ, ಪ್ಲಾಸ್ಟಿಕ್, ಕಾಗದ, ಪೂಜಾ ಸಾಮಗ್ರಿಗಳು ಸೇರಿದಂತೆ ಗಿಡ, ಗಂಟಿಗಳ ಕಿತ್ತು ಸ್ವಚ್ಛತಾ ಕಾರ್ಯ ಮಾಡಿದರು.

ಈ ವೇಳೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎನ್ ಸರಸ್ವತಿ, ರಾಜ್ಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಡಾ.ರಾಘವೇಂದ್ರ, ರಾಜ್ಯ ಕೃಷಿ ಪ್ರಧಾನ ಕಾರ್ಯದರ್ಶಿ ವಿಜೇಂದ್ರ (ಪುಟ್ಟು), ಪ್ರಜ್ನಾವಂತ ವೇದಿಕೆ ಸಂಚಾಲಕ ವಕೀಲ ಸಿ.ಎಸ್. ವೆಂಕಟೇಶ್, ವಕೀಲ ಪರಮೇಶ್, ಚಿಕ್ಕ ತಮ್ಮೇಗೌಡ, ದರಸಗುಪ್ಪೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಸಿ. ಮಾದೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಜಯಶಂಕರ್, ಕೆಂಪರಾಜು ಸೇರಿದಂತೆ ಇತರರು ಇದ್ದರು.