ಸಾರಾಂಶ
ಕರವೇ ವತಿಯಿಂದ ಬೃಹತ್ ಪ್ರತಿಭಟನೆ । ಡಿಸಿ ಮುಖಾಂತರ ಸಿಎಂಗೆ ಮನವಿ ಕನ್ನಡಪ್ರಭ ವಾರ್ತೆ ಯಾದಗಿರಿಕರ್ನಾಟಕ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರವೇ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರು, ನಮ್ಮ ತಾಯಿನಾಡು ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ. ಇಂಥ ಸಕಲ ಸಮೃದ್ಧಿಯ ನಾಡಿಗೆ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇತ್ತೀಚಿನ ಎರಡ್ಮೂರು ದಶಕಗಳಲ್ಲಿ ಇದು ತಾರಕಕ್ಕೇರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರದ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದುಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿನಂಥ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ. ಈ ಮಹಾವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವ ಸಮುದಾಯದ ಮೇಲೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಶೇಷವಾಗಿ ಬೆಂಗಳೂರು ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ. ಕನ್ನಡ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ-ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇ ದಿನೇ ಕುಸಿಯುತ್ತಿದ್ದು, ಹೀಗೆ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದರು.ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿಎಸ್‌ಯು)ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ ನೀಡಬೇಕು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಘಟಕಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಅನುಕ್ರಮವಾಗಿ ಗ್ರೂಪ್ ''''''''ಬಿ ಮತ್ತು ಗ್ರೂಪ್ ''''''''ಎ'''''''' ಉದ್ಯೋಗಗಳಲ್ಲಿ ಕನ್ನಡಿಗರಿಗೆ ಕನಿಷ್ಠ 80 ಪ್ರತಿಶತ ಮತ್ತು 65 ಮೀಸಲಾತಿ ನೀಡಬೇಕು ಎಂದು ಸಮಿತಿಯು ಶಿಫಾರಸು ನೀಡಿತ್ತು. ಆದರೆ, ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ಸರ್ಕಾರ ಜಾರಿ ಮಾಡಿದ ಕೆಲವು ಅಂಶಗಳನ್ನು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರದ ಕಾನೂನನ್ನು ಗಾಳಿಗೆ ತೂರಿ ಬೇರೆ ರಾಜ್ಯಗಳ ನೌಕರರನ್ನೇ ನೇಮಿಸಿಕೊಂಡುಬರುತ್ತಿವೆ. 2019ರಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಸ್ಥಾಯಿ ಆದೇಶದ ನಿಯಮಗಳಿಗೆ ಬದಲಾವಣೆ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಸೂಚಿಸಿತಾದರೂ ಎಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ಈ ಕಾನೂನಿಗೆ ಯಾವ ಬಲವೂ ಇರಲಿಲ್ಲ, ಅರ್ಥವೂ ಇರಲಿಲ್ಲ.ಈ ಹಿನ್ನೆಲೆ ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡು, ಆದಷ್ಟು ಶೀಘ್ರವೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ವಿಶ್ವರಾಜ್ ಹೊನಗೇರಾ, ವೆಂಕಟೇಶ ಬೈರಿಮಡ್ಡಿ, ಶರಣಬಸಪ್ಪ ಕಾಲೂರು, ಅಬ್ದುಲ್ ಚಿಗಾನೂರು, ಅಬ್ದುಲ್ ಹಾದಿಮನಿ, ಶಿವಲಿಂಗ ಸಾಹುಕಾರ, ಶರಣಪ್ಪ ದಳಪತಿ, ಹಣಮಂತ ಖಾನಳ್ಳಿ, ಸಹೇಬಗೌಡ, ಚೌಡಯ್ಯ ಬಾವೂರು, ಸಿದ್ದಪ್ಪ ಕೂಯಿಲೂರು, ಭೀಮರಾಯ್ ರಾಮಸಮುದ್ರ, ಭೀಮುನಾಯಕ ಮಲ್ಲಿಭಾವಿ, ಹಣಮಂತ ತೇಕರಾಳ, ಅರ್ಜುನ ಪವಾರ, ಯಮನಯ್ಯ ಗುತ್ತೆದಾರ ಇತರರಿದ್ದರು.