ಹೋಬಳಿ ಮಟ್ಟದಲ್ಲಿ ಮೇವು ಘಟಕ ಸ್ಥಾಪಿಸಲು ಒತ್ತಾಯ

| Published : Mar 01 2024, 02:16 AM IST

ಸಾರಾಂಶ

ಹೋಬಳಿ ಮಟ್ಟದಲ್ಲಿ ಮೇವು ಘಟಕಗಳನ್ನು ಸ್ಥಾಪಿಸಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಘಟಕದಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಎಲ್ಲಾ ಹೋಬಳಿ ಮಟ್ಟದಲ್ಲಿ ಮೇವು ಘಟಕಗಳನ್ನು ಸ್ಥಾಪಿಸಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಘಟಕದಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸುರಪುರ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೆರೆ, ಬಾವಿ, ಹಳ್ಳಕೊಳ್ಳ, ನದಿ ಬತ್ತಿ ಹೋಗಿದ್ದು, ಪ್ರಾಣಿಗಳಿಗೆ ಕುಡಿಯಲು ನೀರು ಮತ್ತು ಮೇವಿನ ಸಮಸ್ಯೆ ತಲೆದೋರಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿವೆ. ಅಡವಿಯಲ್ಲಿ ಎಲ್ಲಿಯೂ ನೀರಿಲ್ಲ. ಆದ್ದರಿಂದ ಪ್ರಾಣಿಗಳು ನಿಲ್ಲುವ ಕೆಲ ಪ್ರದೇಶಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಜಲದಾಹ ತೀರಿಸಿ ಮೂಕ ಪ್ರಾಣಿಗಳ ಜೀವ ಉಳಿಸಬೇಕು. ಅಲ್ಲದೆ ಹೋಬಳಿ ಮಟ್ಟದಲ್ಲಿ ಮೇವಿನ ಘಟಕಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಲು ಪಶು ಸಂಗೋಪನೆ ಇಲಾಖೆಗೆ ಸೂಚನೆ ನೀಡಬೇಕು. ಪ್ರಾಣಿಗಳ ಜೀವ ಉಳಿಸಲು ಸರಕಾರ ಮುಂದಾಗಬೇಕು. ಕಿಂಚಿತ್ತು ಪ್ರಾಣಿಗಳಿಗೆ ತೊಂದರೆಯಾದದಲ್ಲಿ ಉಗ್ರ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಶರಣು ಬೈರಿಮರಡಿ, ಮಲ್ಲಪ್ಪ ಕಬಾಡಗೇರಾ, ಶಿವರಾಜ ವಗ್ಗರ ದೀವಳಗುಡ್ಡ, ರಾಜು ದರಬಾರಿ ಕೃಷ್ಣಹಾವಿನ ಕುಂಬಾರಪೇಟೆ, ರವಿ ಬಿಚ್ಚುಗತ್ತಿಕೇರಾ, ಧನರಾಜ ರಾಠೋಡ್, ಮಹಮದ್ ಗೌಸಿ, ರವಿಚಂದ್ರ ಟರ್ಕಿ, ಶಿವರಾಜ ಪಾಟೀಲ, ಹುಸೇನಿ ರಂಗಂಪೇಟೆ, ಮುರುಳಿ ತಿಮ್ಮಾಪುರ, ನಾಗರಾಜ ಪ್ಯಾಪ್ಲಿ, ಗೌಸ ರಂಗಂಪೇಟೆ ಸೇರಿದಂತೆ ಇತರರಿದ್ದರು.