ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ದೇಶದ ಬುದ್ಧಿವಂತ ವಿದ್ಯಾರ್ಥಿಗಳನ್ನು ವಿದೇಶಗಳು ಕೈಬೀಸಿ ಕರೆಯುತ್ತವೆ ಎಂದು ಸ್ಟಡಿ ನೆಕ್ಸ್ಟ್ ಓವರ್‌ಸಿಸ್ ಕೇಂದ್ರದ ಮ್ಯಾನೇಜಿಂಗ್ ಪಾರ್ಟ್ನರ್ ರಾಕೇಶ್ ಎಂ.ಎಸ್ ಹೇಳಿದರು.ನಗರದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನುದ್ದೇಶಿಸಿ ಮಾತನಾಡಿದ ಅವರು, ವಿಜ್ಞಾನ ವಿಭಾಗದಲ್ಲಿ ಕಲಿತು ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹಲವಾರು ಅವಕಾಶಗಳಿವೆ. ಆದರೆ, ಅವುಗಳನ್ನು ಅರಿತುಕೊಂಡು ಸಮರ್ಪಕ ಆಯ್ಕೆ ಮಾಡಿಕೊಂಡು ಹೊರಟಲ್ಲಿ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ. ಅಲ್ಲದೇ ಬಾಹ್ಯಾಕಾಶ ವಿಜ್ಞಾನ ಕೇಂದ್ರಗಳಲ್ಲಿಯೂ ಸೇವೆ ಮಾಡುವುದಕ್ಕೆ ವಿದೇಶಗಳಲ್ಲಿ ಬಹಳಷ್ಟು ಅವಕಾಶಗಳಿವೆ ಎಂದರು.ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಎಷ್ಟು ಅವಕಾಶಗಳಿವೆಯೋ ಅದನ್ನು ಮೀರಿದ ಅವಕಾಶಗಳು ವಿದೇಶಗಳಲ್ಲಿವೆ. ಅದರಲ್ಲೂ ಉನ್ನತ ಶಿಕ್ಷಣವನ್ನು ವಿದೇಶಗಳಲ್ಲಿಯೇ ಕೈಗೊಂಡರೆ ಅಲ್ಲಿರುವ ಉದ್ಯೋಗಾವಕಾಶಗಳು ನಮಗೆ ತಿಳಿದು ಬರುತ್ತವೆ. ಮಾತ್ರವಲ್ಲ ಉನ್ನತ ಸಾಧನೆ ಮಾಡುವುದಕ್ಕೆ ಅಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಅದೂ ಅಲ್ಲದೇ ಉತ್ತಮ ಉದ್ಯೋಗದ ಜೊತೆಗೆ ಆಕರ್ಷಕವಾದ ಸಂಬಳ ಸಹ ದೊರೆಯುವುದರಿಂದ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳುವುದು ಅವಶ್ಯಕವಾಗಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಬೇಕಾದರು ನಮ್ಮ ಸಂಸ್ಥೆ ಒದಗಿಸುತ್ತದೆ ಎಂದು ತಿಳಿಸಿದರು.ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಇದೇ ದಿನ ಇಡೀ ಜಗತ್ತು ಭಾರತದ ಕಡೆಗೆ ತಿರುಗಿತ್ತು. ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಭಾರತದ ಸಾಧನೆಯನ್ನು ಕಂಡು ಹುಬ್ಬೇರಿಸಿ ನೋಡುತ್ತಿದ್ದವು. ಚಂದ್ರನ ದಕ್ಷಿಣ ಧೃವದ ಮೇಲೆ ರೋವರ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲುಗಲ್ಲನ್ನು ಸ್ಥಾಪಿಸಿತು. ಅದರ ನೆನಪಿಗಾಗಿ ಪ್ರತಿ ವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಣೆ ಮಾಡುವುದಕ್ಕೆ ಭಾರತ ಸರ್ಕಾರ ನಿರ್ಧಾರ ಮಾಡಿತು. ಈ ಶುಭ ಸಂದರ್ಭದಲ್ಲಿ ಮಕ್ಕಳು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿರುವಂತ ವಿಫುಲ ಅವಕಾಶಗಳನ್ನು ಬಳಸಿಕೊಂಡು ಕೇವಲ ನೆಲದ ಮೇಲೆ ಮಾತ್ರವಲ್ಲದೇ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾರಂಥೆ ಭಾರತ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸುವ ಕಾರ್ಯಕ್ಕೆ ಅಣಿಯಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸ್ಟಡಿ ನೆಕ್ಸ್ಟ್ ಸಂಸ್ಥೆಯ ವಿಭಾಗದ ಮುಖ್ಯಸ್ಥೆ ಮಾನಸಾ ರಾಕೇಶ್, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪುಷ್ಪಾ ಕೌಲಗಿ, ನಿರ್ದೇಶಕ ಭುವನ್ ಕೌಲಗಿ, ಶ್ರೀದೇವಿ, ಕಿರಣ ಢವಳೇಶ್ವರ, ಈರಯ್ಯ ಮಠಪತಿ ಹಾಗೂ ಕಾಲೇಜಿನ ಉಪನ್ಯಾಸಕ ಮಂಡಳಿ ಹಾಜರಾಗಿದ್ದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರದ್ಧಾ ಜಾಧವ ನಿರೂಪಿಸಿದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸ್ವಾಗತಿಸಿ, ವಂದಿಸಿದರು.