ಸಾರಾಂಶ
ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಸ್ಥಳೀಯ ಮತ್ತು ವಿದೇಶಿಗರ ಫಂಡಿಂಗ್ ಆಗಿದೆ. ಈಗ ಬರುವ ಮಾಹಿತಿ ಭಯಾನಕವಾಗಿವೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಹತ್ಯೆಗೆ ವಿದೇಶಿ ಫಂಡಿಂಗ್ ಮಾಡಿರುವುದು ಕನ್ನಡಿಗರ ದುರಾದೃಷ್ಟ. ಎನ್ಐಎ ಇದನ್ನು ಹೊರತಂದ ನಂತರ ಇದೊಂದು ಗಂಭೀರ ಸುದ್ದಿಯಾಗಿದೆ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಸ್ಥಳೀಯ ಮತ್ತು ವಿದೇಶಿಗರ ಫಂಡಿಂಗ್ ಆಗಿದೆ. ಈಗ ಬರುವ ಮಾಹಿತಿ ಭಯಾನಕವಾಗಿವೆ. ಎಲ್ಲೋ ವಿದೇಶದಲ್ಲಿದ್ದವರ ಹಣ ಇಲ್ಲಿಯ ಜನರನ್ನು ಕೊಲ್ಲಿಸಬಹುದು ಅಂತ ಹೇಳಿದರೆ ಕರ್ನಾಟಕದ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹಾಳಾಗಿದೆ ಅಂತ ಅರ್ಥ ಮಾಡಿಕೊಳ್ಳಬಹುದು. ಸಿದ್ದರಾಮಯ್ಯನವರ ಕಾಲದಲ್ಲಿ ಇದನ್ನು ನೋಡಬೇಕಾದ ಸ್ಥಿತಿ ಬಂತು ಅನ್ನೋದು ಕನ್ನಡಿಗರ ದುರದೃಷ್ಟ ಎನ್ನಬಹುದು ಎಂದು ಕಿಡಿಕಾರಿದರು.
ತುರ್ತು ಪರಿಸ್ಥಿತಿ ಅನ್ನೋದು ಭಾರತದ ದೃಷ್ಟಿಯಿಂದ ಕರಾಳ ದಿನವಾಗಿದೆ. ಅಂಬೇಡ್ಕರ್ ಅವರು ನಮಗೆಲ್ಲ ಕೊಟ್ಟ ಸಂವಿಧಾನವನ್ನು ಗಾಳಿಗೆ ತೂರಿ ಎಮರ್ಜೆನ್ಸಿ ಜಾರಿಗೆ ತರಲಾಯಿತು. ತುರ್ತು ಪರಿಸ್ಥಿತಿ ಜಾರಿಗೆ ತಂದ ನಂತರ ಸಂವಿಧಾನವನ್ನು ಹಳಿಯುವಂತಹ ಕೆಲಸವಾಯಿತು. ಸಂವಿಧಾನವನ್ನು ಸಮಾಧಿ ಮಾಡುವಂತಹ ಕೆಲಸ ಇಂದಿರಾ ಗಾಂಧಿ ಮಾಡಿದ್ದಾರೆ. ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದೇ ಕರೆಯಲಾಗುತ್ತದೆ. ಅಂಬೇಡ್ಕರ್ ಅವರಿಗೆ ಆಪ್ತವಾದಂತಹ ಮೂಲಭೂತ ಹಕ್ಕುಗಳನ್ನು ಕಸಿಯುವಂತಹ, ಸಮಾಜದ ಜನರ ಮೂಲಹಕ್ಕುಗಳನ್ನು ರಾಷ್ಟ್ರಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಇಂತಹ ಎಲ್ಲ ಪ್ರಯತ್ನ ಮಾಡಿದಂತಹ ಇಂದಿರಾಗಾಂಧಿ ಅವರ ಕೆಲಸವನ್ನು ಸಮಾಜಕ್ಕೆ ತಲುಪಿಸುವಂತಹ ಕೆಲಸ ಆಗಬೇಕು ಎಂದು ತಿಳಿಸಿದರು.ಇದು ಇಂದಿರಾಗಾಂಧಿ ಪ್ರಿಯಾಂಬಲ್:
ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದ, ಜಾತ್ಯತೀತ ಪದ ತೆಗೆಯುವ ಹೇಳಿಕೆ ವಿಚಾರ ಪ್ರಸ್ತಾಪಿಸಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು, ಪೀಠಿಕೆಯಲ್ಲಿ ಏನಿರಬೇಕು ಏನಿರಬಾರದು ಎಂಬುವುದು 1947ರಲ್ಲೇ ವಿಸ್ತೃತವಾದ ಚರ್ಚೆ ಮಾಡಿದ್ದಾರೆ. ಏಕೆ ಜಾತ್ಯಾತೀತ, ಸಮಾಜವಾದ ಪದ ಇರಬಾರದು ಅನ್ನುವ ಕೆ.ಟಿ.ಶಾ ಅವರ ಪ್ರಶ್ನೆಗೆ ಸ್ವತಃ ಅಂಬೇಡ್ಕರ್ ಅವರೇ ಉತ್ತರ ನೀಡಿದ್ದಾರೆ. ಆದ್ರೆ ಇವೆಲ್ಲವನ್ನೂ ಇಂದಿರಾಗಾಂಧಿ ಗಾಳಿಗೆ ತೂರಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಬೇಕಂತಲೇ ಎಮರ್ಜೆನ್ಸಿ ಸಂದರ್ಭದಲ್ಲಿ ಅಂಬೇಡ್ಕರ್ ಬೇಡ ಎಂದ ಪದಗಳನ್ನೇ ಸೇರಿಸಿದ್ದರು. ಅಂಬೇಡ್ಕರ್ ಅವರು ಬೇಡ ಎಂದ ಕೆಲಸವನ್ನು ಮಾಡಿ ಇದು ಅಂಬೇಡ್ಕರ್ ಅವರ ಸಂವಿಧಾನ ಅಂತ ಹೇಳಿಕೆ ಸಾಧ್ಯವಿಲ್ಲ. ಇದು ಬಾಬಾ ಸಾಹೇಬರ ಪ್ರಿಯಾಂಬಲ್ ಅಲ್ಲ. ಇದು ಇಂದಿರಾಗಾಂಧಿ ಪ್ರಿಯಾಂಬಲ್ ಅಂತ ಸಿದ್ದರಾಮಯ್ಯ ಅವರು ಹೇಳಿಕೊಂಡರೆ ಒಳ್ಳೆಯದು. ಈ ಸತ್ಯವನ್ನು ಎದುರಿಸುವ ತಾಕತ್ತು ಕಾಂಗ್ರೆಸ್‌ಗೆ ಇಲ್ಲ ಎಂದು ಹೇಳಿದರು.ಹಿಟ್ಲರ್ ಮಾದರಿ ಸರ್ಕಾರ:
ಹಿಂದೂ ವಾಗ್ಮಿಗಳ ಮೇಲೆ ಕಾಂಗ್ರೆಸ್ ಸರ್ಕಾರ ನಿರ್ಬಂಧ ಹೇರುತ್ತಿರುವ ವಿಚಾರದ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಪರಿವಾರದ ಜೀನ್ಸ್ ಇವತ್ತಿನವರೆಗೂ ಹರಿಯುತ್ತಿದೆ. ಇಂದಿರಾಗಾಂಧಿ ಅವರು ಮಾತ್ರ ಸರ್ವಾಧಿಕಾರತ್ವ ಪ್ರದರ್ಶಿಸಿದವರಲ್ಲ. ಅಂಬೇಡ್ಕರ್ ಬದುಕಿದ್ದಾಗಲೇ ನೆಹರೂ ಅವರು ತಿದ್ದುಪಡಿ ತಂದಿದ್ದರು. ಅವತ್ತಿನಿಂದ ಇವತ್ತಿನವರೆಗೂ ಕಾಂಗ್ರೆಸ್, ಸಮಾಜದ ಮೂಲಭೂತ ಹಕ್ಕುಗಳನ್ನು ಮೊಟಕು ಮಾಡಲು ನಿಂತಿದೆ. ಹಾಗಾಗಿಯೇ ಸಿದ್ದರಾಮಯ್ಯ ಅವರು ಜಿಲ್ಲೆಯಿಂದ ಜಿಲ್ಲೆಗೆ ಹೋಗುವುದನ್ನು ತಡೆಯಲು ಈಗ ಮತ್ತೊಂದು ಕಾನೂನು ತರಲು ಪ್ರಯತ್ನ ಮಾಡುತ್ತಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾಗುವ ಭಾಷಣ ಮಾಡಿದರೆ ಮೂರು ವರ್ಷ ಜೈಲಿಗೆ ಹಾಕಬೇಕೆನ್ನುವ ಹೊಸ ಕಾನೂನು ತರಲು ಹೊರಟಿದ್ದಾರೆ. ಇದು ನಿಸ್ಸಂಶಯವಾಗಿ ನೆಹರು ಅವರು ಮೊದಲು ತಂದ ತಿದ್ದುಪಡಿಯಂತೆಯೇ ಈಗ ಮಾಡಲಿಕ್ಕೆ ಹೊರಟಿದ್ದಾರೆ. ಇದೊಂದು ರೀತಿಯ ಹಿಟ್ಲರ್ ಮಾದರಿಯ ಸರ್ಕಾರ ಅಂತ ಹೇಳಿದ್ದಕ್ಕೆ ಬಿಜೆಪಿ ಮೇಲೆ ಕೇಸ್ ಹಾಕಿದರು. ಬಹುಶಃ ಇದು ದೇಶಕ್ಕೆ ಗೊತ್ತಾಗುತ್ತದೆ. ಇದೊಂದು (ಸಿದ್ದರಾಮಯ್ಯ ಸರ್ಕಾರ) ಹಿಟ್ಲರ್ ಮಾದರಿ ಸರ್ಕಾರವೇ ಅಂತ ತಿಳಿಯುತ್ತೆ ಎಂದರು.ಚಕ್ರವರ್ತಿ ತಡೆಯಬೇಕೆಂದು ಖಂಡಿತ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ವಿರುದ್ಧ ಇರುವ ಕೇಸ್‌ಗಳನ್ನು ಒಟ್ಟುಗೂಡಿಸಲು ಮುಂದಾಗಿದ್ದರು. ಅವರ ದುರಾದೃಷ್ಟಕ್ಕೆ ಪೆಟ್ಟಿ ಕೇಸ್‌ಗಳನ್ನು ಹಾಕಿದ್ದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ದಯನೀಯ ಸ್ಥಿತಿ ಎತ್ತಿ ತೋರಿಸುತ್ತದೆಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.