ಸಾರಾಂಶ
ಹನೂರು: ಅರಣ್ಯದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಘಟನೆ ನಡೆದಿದೆ.
ಹನೂರು ವ್ಯಾಪ್ತಿಯ ಹೂಗ್ಯಂ ಗಡಿ ಗ್ರಾಮದ ಮಲೆಮಾದೇಶ್ವರ ವನ್ಯಧಾಮ ವ್ಯಾಪ್ತಿಗೆ ಒಳಪಡುವ ಅರಣ್ಯ ಪ್ರದೇಶದ ಮೀಣ್ಯಂ ಬಳಿ ಕೊಪ್ಪ ಗ್ರಾಮದ ನಿವಾಸಿ ಮುನಿಯಪ್ಪ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯಾಗಿದ್ದು, ಮತ್ತೋರ್ವ ಕುಳ್ಳುಚ್ಚ ಸ್ವಲ್ಪದರದಲ್ಲೇ ಪಾರಾಗಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.ಘಟನೆಯ ವಿವರ: ಮುನಿಯಪ್ಪ ಹಾಗೂ ಈತನ ಸ್ನೇಹಿತ ಕುಳ್ಳುಚ್ಚ ಒಡೆಯರಪಾಳ್ಯ ಗ್ರಾಮದ ಜಮೀನೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಾರ್ಯನಿಮಿತ್ತ ಕೊಪ್ಪ ಗ್ರಾಮಕ್ಕೆ ಬಂದು ಕೆಲಸ ಮುಗಿದ ನಂತರ ವಾಪಸ್ ಕೂಲಿ ಕೆಲಸಕ್ಕೆ ಒಡೆಯರಪಾಳ್ಯ ಗ್ರಾಮಕ್ಕೆ ತೆರಳುತ್ತಿದ್ದಾಗ ಅರಣ್ಯದಲ್ಲಿ ಕಾಡಾನೆ ಇಬ್ಬರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಮುನಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಈತನ ಸ್ನೇಹಿತ ಕುಳ್ಳುಚ್ಚ ಪ್ರಜ್ಞೆ ಇಲ್ಲದೆ ಅರಣ್ಯದಲ್ಲಿಯೇ ಬಿದ್ದಿದ್ದನ್ನು ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕುಳ್ಳುಚ್ಚ ಅವರನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಗಾಯಗೊಂಡ ವ್ಯಕ್ತಿ ಕುಳುಚ್ಚ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕುಳ್ಳುಚ್ಚ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅರಣ್ಯದಂಚಿನ ಚೆನ್ನೂರು ಗ್ರಾಮದಲ್ಲಿ ಕರಡಿ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗಂಗನ ದೊಡ್ಡಿ ಬಸಪ್ಪನ ದೊಡ್ಡಿ ಸುತ್ತಮುತ್ತ ಮೂರು ಚಿರತೆಗಳ ಕಾಟದಿಂದ ಜನ ಜಾನುವಾರು, ರೈತರ ನಿದ್ದೆಗಡಿಸಿದೆ. ಕಾಡಂಚಿನ ಕೊಪ್ಪ ಗ್ರಾಮದ ಕೂಲಿ ಕಾರ್ಮಿಕ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಗಾಯಾಳುಗೆ ಚಿಕಿತ್ಸೆ ನೀಡಿ ಹೆಚ್ಚಿನ ಪರಿಹಾರ ನೀಡಬೇಕು. ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಎಲ್ಲೇ ಮೀರಿದೆ. ಜೊತೆಗೆ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿಯಿಂದ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ತಿಳಿಸಿದ್ದಾರೆ. ಅರಣ್ಯದ ರಸ್ತೆಯಲ್ಲಿ ಕೊಪ್ಪ ಗ್ರಾಮದಿಂದ ಒಡೆಯರಪಾಳ್ಯ ಗ್ರಾಮಕ್ಕೆ ತೆರಳುತ್ತಿದ್ದ ಮುನಿಯಪ್ಪ ಎಂಬ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈತನ ಜೊತೆಗಿದ್ದ ಕುಳ್ಳುಚ್ಚನನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.- ಪುಟ್ಟರಾಜು, ವಲಯ ಅರಣ್ಯ ಅಧಿಕಾರಿ, ಹೂಗ್ಯಂ