ಕುಶಾಲನಗರ: ಜಾಗತಿಕ ತಾಪಮಾನ ಮತ್ತು ಪರಿಸರದ ಸಮತೋಲನವನ್ನು ಕಾಪಾಡಲು ಅರಣ್ಯ ಸಂರಕ್ಷಣೆ ಅಗತ್ಯ. ಪ್ರತಿಯೊಬ್ಬ ನಾಗರಿಕನು ಅರಣ್ಯ ಇಲಾಖೆಯ ಜೊತೆಗೆ ಕೈಜೋಡಿಸಿ ಗಿಡ ಮರಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಜವಾಬ್ದಾರಿ ವಹಿಸಬೇಕು ಎಂದು ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಹೇಳಿದರು. ಕುಶಾಲನಗರದ ಪಟ್ಟಣ ವ್ಯಾಪ್ತಿಯ ಅರಣ್ಯ ಇಲಾಖೆಯ ಡಿಪೋ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನದ ಆಚರಣೆಯ ಸಂದರ್ಭದಲ್ಲಿ ಮಾತನಾಡಿದರು. ಜನಸಂಖ್ಯೆ ಏರಿಕೆಯಾದಂತೆ ಅರಣ್ಯ ಪ್ರದೇಶಗಳು ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಆ ಮೂಲಕ ಅರಣ್ಯದಲ್ಲಿ ಇರಬೇಕಾದ ಜೀವಸಂಕುಲ ತಮ್ಮ ನೆಲೆಯನ್ನು ಕಳೆದುಕೊಂಡು ಅತಂತ್ರವಾಗುತ್ತವೆ. ಪ್ರಾಣಿ ಮಾನವ ಸಂಘರ್ಷಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂದ ಅವರು, ಮನುಷ್ಯ ತಾನು ಬದುಕುವುದು ಮಾತ್ರವಲ್ಲ ತನ್ನ ಸುತ್ತಲಿನ ಪ್ರಾಣಿ ಸಂಕುಲವನ್ನು ಕಾಪಾಡುವ ಜವಾಬ್ದಾರಿ ಅರಿಯಬೇಕಾಗಿದೆ ಎಂದರು.

ಪ್ರತಿಯೊಬ್ಬ ತನ್ನ ಹುಟ್ಟುಹಬ್ಬಕ್ಕೆ ಆ ದಿನದ ನೆನಪಿಗಾಗಿ ಒಂದೊಂದು ಗಿಡವನ್ನು ನೆಟ್ಟು ಬೆಳೆಸಿದಲ್ಲಿ ಸಮೃದ್ಧ ಪ್ರಕೃತಿ ಪರಿಸರ ಸೃಷ್ಟಿ ಸಾಧ್ಯ ಎಂದರು.

ಅರಣ್ಯ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಈ ಸಂದರ್ಭ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳಾದ ರಕ್ಷಿತ್ ಕರೆ ನೀಡಿದರು. ಸಂಘದ ಉಪಾಧ್ಯಕ್ಷರಾದ ಮೊಹಮ್ಮದ್ ಮುಸ್ತಾಫಾ, ಸದಸ್ಯರಾದ ಸಬಲಂ ಬೋಜಣ್ಣ ರೆಡ್ಡಿ, ವನಿತಾ ಚಂದ್ರಮೋಹನ್, ಟಿ ಆರ್ ಪ್ರಭುದೇವ್ ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳಾದ ಕೆ ಎನ್ ದೇವಯ್ಯ, ವೆಂಕಟೇಶ್, ಜಗದೀಶ್, ಉಮೇಶ್, ಮಧುಸೂದನ್, ಲಿಂಗಪ್ಪ ಗಸ್ತು ಅರಣ್ಯಪಾಲಕರಾದ ಸಿದ್ದರಾಜು ಮತ್ತು ಇಲಾಖೆಯ ಸಿಬ್ಬಂದಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.