ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ತೊಡಕು ಆರೋಪ: ಸಾರ್ವಜನಿಕರಿಂದ ಕಚೇರಿಗೆ ಮುತ್ತಿಗೆ

| Published : Feb 02 2025, 11:47 PM IST

ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ತೊಡಕು ಆರೋಪ: ಸಾರ್ವಜನಿಕರಿಂದ ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಪಯೋಗಿ ಇಲಾಖೆಯಿಂದ ಶನಿವಾರಸಂತೆ, ದುಂಡಳ್ಳಿ, ಚಂಗಡಹಳ್ಳಿ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2023ರಲ್ಲಿ ಚಾಲನೆ ನೀಡಿದ್ದರೂ ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸದಿರುವ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ ಎಂದು ಆರೋಪಿಸಿ, ಶನಿವಾರ ದುಂಡಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು, ಸಾರ್ವಜನಿಕರು, ಪ್ರಮುಖರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಲೋಕಪಯೋಗಿ ಇಲಾಖೆಯಿಂದ ಶನಿವಾರಸಂತೆ, ದುಂಡಳ್ಳಿ, ಚಂಗಡಹಳ್ಳಿ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2023ರಲ್ಲಿ ಚಾಲನೆ ನೀಡಿದ್ದರೂ ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸದಿರುವ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ ಎಂದು ಆರೋಪಿಸಿ, ಶನಿವಾರ ದುಂಡಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು, ಸಾರ್ವಜನಿಕರು, ಪ್ರಮುಖರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಶನಿವಾರಸಂತೆ, ದುಂಡಳ್ಳಿ, ಚಂಗಡಹಳ್ಳಿ ಮೂಲಕ ಯಸಳೂರುಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ರಸ್ತೆಯನ್ನು ಲೋಕೋಪಯೋಗಿ ಇಲಾಖೆ 9 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ 2023ರಲ್ಲಿ ಗುತ್ತಿಗೆ ನೀಡಿತು. ಅದರಂತೆ ಗುತ್ತಿಗೆದಾರರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ರಸ್ತೆ ಅಗಲೀಕರಣ ಸಂದರ್ಭ ರಸ್ತೆ ಬದಿಯಲ್ಲಿರುವ ಮತ್ತು ಖಾಸಗಿಯವರ ತೋಟದ ಬೇಲಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ ಮರ ತೆರವುಗೊಳಿಸುವಂತೆ ಮನವಿ ನೀಡಿತ್ತು.

ಅದರಂತೆ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ 16 ಲಕ್ಷ ರು. ಕೂಡ ಪಾವತಿ ಮಾಡಿತ್ತು. ಈ ಸಂಬಂಧ ಅರಣ್ಯ ಇಲಾಖೆಯವರು 15 ದಿನದ ಒಳಗಡೆ ಮರಗಳನ್ನು ತೆರವುಗೊಳಿಸುವುದಾಗಿ ವಾಗ್ದಾನ ನೀಡಿತ್ತು. ಆದರೆ ಎರಡು ವರ್ಷ ಕಳೆದರೂ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಲು ಮುಂದಾಗಿಲ್ಲ. ಆದರೂ ಗುತ್ತಿಗೆದಾರರು ಮೂರು ಕಿ.ಮೀ. ದೂರ ರಸ್ತೆ ಅಗಲಿಕರಣ ಕಾಮಗಾರಿ ಆರಂಭಿಸಿದ್ದಾರೆ. ಆದರೆ ಮರಗಳು ರಸ್ತೆ ಬದಿಯಲ್ಲಿರುವುದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಆದರೆ ಈಗ ನಡೆದಿರುವ ಕಾಮಗಾರಿ ಅಪೂರ್ಣವಾಗಿದ್ದರಿಂದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಜೊತೆಯಲ್ಲಿ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಧೂಳು ನುಗ್ಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಒಂದೂವರೆ ವರ್ಷಗಳಿಂದ ಸಾರ್ವಜನಿಕರು, ಗ್ರಾಮಸ್ಥರು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಗಳನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಹಲವರು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆ ಗ್ರಾಮಸ್ಥರು ಶನಿವಾರ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದರು.

ಶನಿವಾರ ನೂರಾರು ಮಂದಿ ಪ್ರತಿಭಟನೆಗಾರರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೂ ಪ್ರತಿಭಟನೆಗಾರರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಡಿಎಫ್‍ಒ ಬರುವಂತೆ ಒತ್ತಾಯಿಸಿದರು. ಶನಿವಾರಸಂತೆ ಆರ್‌ಎಫ್‍ಒ ಪೂಜಶ್ರೀ, ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್, ಮೇಲಾಧಿಕಾರಿಗಳ ಗಮನಕ್ಕೆ ತಂದು ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದಾಗ ಇದಕ್ಕೆ ಒಪ್ಪದ ಪ್ರತಿಭಟನೆಗಾರರು ನಿಮಗೆ ನಾವೇ ಒಂದು ವಾರ ಸಮಯಕೊಡುತ್ತೇವೆ ವಾರದೊಳಗೆ ಮರಗಳನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆ ಲಿಖಿತ ಹೇಳಿಕೆ ನೀಡಿದ್ದರೂ ಹೇಳಿಕೆಯಲ್ಲಿ ಒಂದು ವಾರದಲ್ಲಿ ತೆರವುಗೊಳಿಸುವ ಕುರಿತಾಗಿ ನಮೂದಿಸದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆಗಾರು ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು.

ಪೊಲೀಸರು, ಪ್ರತಿಭಟನೆಗಾರರ ಮನವೊಲಿಸಿದರು. ಕೊನೆಗೆ ಪ್ರತಿಭಟನೆಗಾರರು ಮುಂದಿನ ಶುಕ್ರವಾರದೊಳಗೆ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸದಿದ್ದಲ್ಲಿ ಮತ್ತೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ತಡೆ ಮಾಡುವುದಾಗಿ ಎಚ್ಚರಿಸಿದರು. ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗಾರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ದುಂಡಳ್ಳಿ ಸುಬ್ರಮಣಿ, ಎಸ್.ಎನ್. ರಘು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ದೇವರಾಜ್, ರಂಗರಾಜ್, ಉಮೇಶ್, ಕಾರ್ತಿಕ್, ರಮೇಶ್, ನಾಗರಾಜ್, ಗಿರೀಶ್, ಚಂದ್ರಣ್ಣ ಮುಂತಾದವರಿದ್ದರು. ಸ್ಥಳಕ್ಕೆ ಕುಶಾಲನಗರ ಸಿಐ ರಾಜೇಶ್ ಕೋಟ್ಯಾನ್, ಶನಿವಾರಸಂತೆ ಎಸ್.ಐ.ಚಂದ್ರು ಭೇಟಿ ನೀಡಿದ್ದರು.