ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರೈತರ ಭೂಮಿಯನ್ನು ಅರಣ್ಯ ಇಲಾಖೆಯವರು ನಮ್ಮ ಭೂಮಿ ಎಂದು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಅರಣ್ಯ ಸಚಿವರು ಇತ್ತಕಡೆ ಗಮನಹರಿಸಿ ರೈತರ ಭೂಮಿ ಉಳಿಸುವ ಕೆಲಸ ಮಾಡಬೇಕೆಂದು ಜಿಲ್ಲಾ ಅರಣ್ಯ ಭವನದ ಮುಂದೆ ಶನಿವಾರ ನೂರಾರು ರೈತರು ಪ್ರತಿಭಟಿಸಿ ಸ್ಥಳದಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಆನೆಕೆರೆ ಮಾಧ್ಯಮದವರೊಂದಿಗೆ ಮಾತನಾಡಿ, ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ನೀಲಗಿರಿ ಕಾವಲ್ ಎಂಬ ೪೪೮೬ ಎಕರೆ ಜಮೀನನ್ನು ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದೆ. ನಮಗೆ ಸರ್ಕಾರದಿಂದ ೧೯೬೨ -೬೩ -೬೪ ರಂದು ಮಂಜೂರಾತಿ ಮಾತ್ರ ಕೊಟ್ಟಿದ್ದಾರೆ. ನಾವು ಬ್ಯಾಂಕಿನಿಂದ ಈ ಜಮೀನಿನ ಮೇಲೆ ಸಾಲ ಪಡೆದಿದ್ದೇವೆ. ಪ್ರತಿ ವರ್ಷ ಕಂದಾಯವನ್ನೂ ಕಟ್ಟಿದ್ದೇವೆ. ಈ ಜಮೀನಿನಲ್ಲಿ ಮನೆಗಳು, ತೆಂಗಿನ ತೋಟ, ಅಡಿಕೆ, ಕಾಡುಜಾತಿಯ ಮರಗಳು, ಕೊಳವೆ ಬಾವಿಗಳು, ಕರೆಂಟ್ ಇತ್ಯಾದಿಗಳನ್ನು ಮಾಡಿಕೊಂಡಿದ್ದೇವೆ.ಈ ವ್ಯಾಪ್ತಿಯಲ್ಲಿ ೨೬ ಹಳ್ಳಿಗಳು ಸೇರಿವೆ ಎಂದರು.
ವಡ್ಡರಹಟ್ಟಿ, ಸಿದ್ದರಹಟ್ಟಿ, ಬಂದೂರು, ಕಾಳನಕೊಪ್ಪಲು, ಅಂಗ್ಲಾಪುರ, ಕೊರಚರಟ್ಟಿ, ಜಾವಗಲ್, ತಿಮ್ಮನಹಳ್ಳಿ, ನೆಲ್ಲಿಗೆ, ಮೊಸಳೆ, ಕೆರೆಕೋಡಿಹಳ್ಳಿ, ಹಂದ್ರಾಳು, ತಿರುಪತಿಹಳ್ಳಿ, ಮಾವತನಹಳ್ಳಿ, ಕೋಳಗುಂದ, ಗೊಲ್ಲರಹಟ್ಟಿ, ಹೊಸೂರು, ಬಂದೂರುಹಟ್ಟಿ, ನೀಲಗಿರಿಕಾವಲ್, ಕೆ.ಕೆಂಗನಳ್ಳಿ, ಬಕಪ್ಪನಕೊಪ್ಪಲು, ಹಿರೇಹಳ್ಳಿಗಳಿಗೆ ಈ ಜಮೀನು ಸೇರಿರುತ್ತದೆ. ಹರಿಜನ, ಭೋವಿ ಜನ, ಸಿದ್ದರು. ಕೊರಚರು, ಲಂಬಾಣಿ, ಕುರುಬರು, ಲಿಂಗಾಯಿತ, ಜಂಗಾಲಿಗರು, ಈಡಿಗ, ಕೂಲಿ ಕಾರ್ಮಿಕರು. ಈ ಗ್ರಾಮಗಳಲ್ಲಿದ್ದು , ಈಗ ಈ ಜಮೀನು ಅರಣ್ಯ ಇಲಾಖೆಗೆ ಸೇರುತ್ತದೆ ಎನ್ನಲಾಗುತ್ತಿದೆ. ಈ ಜಮೀನನ್ನು ಅಳತೆ ಮಾಡುತ್ತೇವೆ ಎಂದು ಅರಣ್ಯ ಇಲಾಖೆಯವರು ಬಂದು ನೋಟೀಸ್ ಕೊಟ್ಟು ರೈತರನ್ನು ಬೆದರಿಸಿ ಚಿಂತೆಗೀಡು ಮಾಡಿದ್ದಾರೆ ಎಂದು ಹೇಳಿದರು.ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿಯ ಶ್ರೀಮಠದ ಗ್ರಾಮದ ಸರ್ವೇ ನಂ ೧ ರಲ್ಲಿ ನೂರಾರು ರೈತರಿಗೆ ಪ್ರತಿಯೊಬ್ಬರಿಗೂ ೩ ಎಕರೆಯಂತೆ ೨೦೦೭ರಲ್ಲಿ ಕಂದಾಯ ಇಲಾಖೆಯವರು ಮಂಜೂರು ಮಾಡಿಕೊಟ್ಟಿದ್ದಾರೆ. ಎಲ್ಲಾ ರೈತರು ಸ್ವಾಧೀನ ಹೊಂದಿದ್ದು, ಇಲ್ಲಿಯವರೆಗೂ ಕಂದಾಯ ಕಟ್ಟಿಕೊಂಡು ಸಾಗುವಳಿ ಮಾಡಿ ಬರಲಾಗುತ್ತಿದೆ, ಅರಣ್ಯ ಇಲಾಖೆಯವರು ೨೦೦೯-೧೦ ರಲ್ಲಿ ಹಿರಿಯ ರೈತರ ಭೇಟಿ ಮಾಡಿ ಅರಣ್ಯ ಕೃಷಿ ಮಾಡಲು ನಿಮಗೆ ಸಸಿಗಳನ್ನು ವಿತರಣೆ ಮಾಡಿಕೊಡುತ್ತೇವೆ. ಅವುಗಳನ್ನು ಪೋಷಣೆ ಮಾಡಿದ ನಂತರ ನೀವೆ ಕಟಾವು ಮಾಡಿಕೊಳ್ಳಿ ಎಂದು ಹೇಳಿದ್ದು, ಈಗ ಮರಗಳು ಕಟಾವಿಗೆ ಬಂದಿವೆ. ಅರಣ್ಯ ಇಲಾಖೆಯವರು ಈಗ ತಗಾದೆ ತೆಗೆದು ಈ ಮರಗಳು ನಮಗೆ ಸೇರಿದ್ದು, ಈ ಜಾಗವೂ ನಮಗೆ ಸೇರಿದೆ ಎನ್ನುತ್ತಿದ್ದಾರೆ ಎಂದು ದೂರಿದರು.ಎಲ್ಲಾ ರೈತರಿಗೆ ಅರಣ್ಯ ಇಲಾಖೆಯವರ ಕಿರುಕುಳ ಬಾರದಂತೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ರೈತರ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರಕ್ಕೆ ಇರುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಜಿಲ್ಲಾ ಕಾರ್ಯದರ್ಶಿ ಜಯರಾಮ್, ಎಚ್.ಕೆ. ಸಿದ್ಧಪ್ಪ, ಗೌರಿ, ಬೋರಯ್ಯ,ರಾಮಚಂದ್ರು ಇತರರು ಉಪಸ್ಥಿತರಿದ್ದರು.