ಜಾತ್ರಾಮಹೋತ್ಸವದಲ್ಲಿ ಪ್ರಾಣಿ ಸಂಕುಲ, ಸರಿಸೃಪ, ಜೌಷಧಿಯ ಸಸ್ಯ ಸಂಪತ್ತು ಹಾಳಾಗದಂತೆ ಕಪ್ಪತ್ತಗುಡ್ಡ ಉಳಿಸಲು ಅರಣ್ಯ ಇಲಾಖೆ ಶ್ರಮಿಸಲು ಮುಂದಾಗಿದೆ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ಆ. 29ರಂದು ನಂದಿವೇರಿ, ಕಪ್ಪತ್ತಮಲ್ಲಯ್ಯ, ಗಾಳಿಗುಂಡಿ ಬಸವಣ್ಣ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿರ್ಬಂಧಿಸಲು ಅರಣ್ಯ ಇಲಾಖೆ ಪಣ ತೊಟ್ಟಿದೆ.

ಈ ಕುರಿತು ಜಾಗೃತಿ ಮೂಡಿಸಲು ಅಲ್ಲಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ವಾಚರ್‌ಗಳ ನೇಮಿಸಿ, ಪ್ಲಾಸ್ಟಿಕ್‌ನಿಂದ ಆಗುವ ಹಾನಿಯ ಕುರಿತು ಫಲಕಗಳನ್ನು ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಬರಲಿದ್ದಾರೆ. ಆ ಸಂದರ್ಭದಲ್ಲಿ ಅವರು ಪ್ಲಾಸ್ಟಿಕ್‌ ತರದಂತೆ ಜಾಗೃತಿ ಮೂಡಿಸಲು ಹಾಗೂ ಅರಣ್ಯ, ಸಸ್ಯ ಸಂಪತ್ತಿಗೆ ಹಾನಿ ಮಾಡದಂತೆ ನೋಡಿಕೊಳ್ಳಲು ಮುಂದಾಗಿದೆ. ಮೂರು ಕಡೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ವಾಚರ್‌ಗಳನ್ನು ನೇಮಕ ಮಾಡಲಾಗಿದೆ.

ಈ ಬಾರಿಯ ಜಾತ್ರಾಮಹೋತ್ಸವದಲ್ಲಿ ಪ್ರಾಣಿ ಸಂಕುಲ, ಸರಿಸೃಪ, ಜೌಷಧಿಯ ಸಸ್ಯ ಸಂಪತ್ತು ಹಾಳಾಗದಂತೆ ಕಪ್ಪತ್ತಗುಡ್ಡ ಉಳಿಸಲು ಅರಣ್ಯ ಇಲಾಖೆ ಶ್ರಮಿಸಲು ಮುಂದಾಗಿದೆ.

ಕಪ್ಪತ್ತಗುಡ್ಡಕ್ಕೆ ಬರುವ ಭಕ್ತರು ಪ್ರಕೃತಿಯನ್ನು ನೋಡಿ ಹಾಗೇ ಹೋಗದೇ ಗಿಡಗಳ ಟೊಂಗೆ, ಎಲೆ ಮುರಿಯುತ್ತಿರುವುದರಿಂದ ಕೆಲ ಗಿಡಗಳು ಒಣಗುತ್ತಿವೆ. ಕಾರಣ ಪ್ರವಾಸಿಗರು, ಭಕ್ತರು ಎಲೆ,ಕಟ್ಟಿಗೆ ಮುರಿಯುವದನ್ನು ಬಿಡಬೇಕು ಎಂದು ಅರಣ್ಯ ಇಲಾಖೆ ಕೋರಿದೆ.

ಪ್ಲಾಸ್ಟಿಕ್‌ ಬಳಕೆ ಬೇಡ:

ಪ್ಲಾಸ್ಟಿಕ್‌ ಬಳಕೆ ಮಾಡಿ ಬಿಸಾಕಿ ಹೋದರೆ ಏನು ಅರಿಯದ ಕಾಡು ಪ್ರಾಣಿಗಳಿಗೆ ಮಾರಕವಾಗುತ್ತದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲ್‌, ಹಾಳೆ ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪ್ಲಾಸ್ಟಿಕ್ ಬಿಸಾಡಿದರೆ ಬೇಸಿಗೆ ಸಂದರ್ಭದಲ್ಲಿ ಗುಡ್ಡದಲ್ಲಿ ಬೀಳುವ ಬೆಂಕಿಗೆ ಪ್ಲಾಸ್ಟಿಕ್‌ ಸಹ ಕಾರಣವಾಗಲಿದೆ. ಈ ಹಿನ್ನೆಲೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಪ್ಲಾಸ್ಟಿಕ್‌ ಮುಕ್ತ ಜಾತ್ರಾಮಹೋತ್ಸವಕ್ಕೆ ದೃಢ ಸಂಕಲ್ಪ ಮಾಡುವ ಮೂಲಕ ಕಪ್ಪತ್ತಗುಡ್ಡ ಐಸಿರಿ ಕಾಪಾಡಲು ಮುಂದಾಗಬೇಕಿದೆ ಎನ್ನುವುದು ಅರಣ್ಯ ಇಲಾಖೆ ಮನವಿ.

ನಾಡು ಕಂಡ ಅಪರೂಪದ ಸಸ್ಯ ಕಾಶಿ ಕಪ್ಪತ್ತಗುಡ್ಡ ಉಳಿದರೆ ಮಾತ್ರ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆ ಬೆಳೆ ಜನ ಜೀವನ ಸುರಕ್ಷಿತವಾಗಿರಲು ಸಾಧ್ಯ ಎನ್ನುವುದನ್ನು ಅರಿತು ಜಾತ್ರಾಮಹೋತ್ಸವಕ್ಕೆ ಬರುವ ಭಕ್ತರು ಪ್ಲಾಸ್ಟಿಕ್‌ ಮುಕ್ತ ಜಾತ್ರೆಯನ್ನಾಗಿಸಬೇಕು ಎಂದು ಪರಿಸರವಾದಿಗಳು ಮನವಿ ಮಾಡಿದ್ದಾರೆ.

ಪ್ಲಾಸ್ಟಿಕ್‌ ಬಳಕೆ ತಡೆಗಾಗಿ ಅರಣ್ಯ ಇಲಾಖೆ ಈಗಾಗಲೇ ಸೂಕ್ತ ಕ್ರಮ ವಹಿಸಿದ್ದು, ಪ್ಲಾಸ್ಟಿಕ್‌ ಬಳಕೆ ಮಾಡಿ ಬಿಸಾಕಿ ಹೋದರೆ ಕಾಡು ಪ್ರಾಣಿಗಳ ಜೀವಕ್ಕೆ ಸಂಚಕಾರ ಉಂಟು ಮಾಡುತ್ತದೆ. ಈ ಹಿನ್ನೆಲೆ ಪ್ಲಾಸ್ಟಿಕ್‌ ಮುಕ್ತ ಜಾತ್ರೆಯನ್ನಾಗಿಸಲು ಭಕ್ತರು ಮುಂದಾಗಬೇಕು ಎಂದು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಪ್ರಾಣವಾಯುವಾದ ಕಪ್ಪತ್ತಗುಡ್ಡ ಉಳಿಸಿ ಬೆಳೆಸಿಕೊಂಡು ಹೋಗುವುದು ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆ ಪ್ಲಾಸ್ಟಿಕ್‌ ಮುಕ್ತ ಜಾತ್ರೆಗೆ ಭಕ್ತರು ಮುಂದಾಗಬೇಕು ಎಂದು ಮುಂಡರಗಿ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.