ರಸ್ತೆ ಮೇಲೆ ಬೇಲಿ ನಿರ್ಮಾಣ ಮಾಡಿದ ಅರಣ್ಯ ಇಲಾಖೆ

| Published : Mar 16 2025, 01:49 AM IST

ಸಾರಾಂಶ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಕಳಸ - ಇಡಕಣಿ ಮಾರ್ಗದ ನಾಗಲಮಕ್ಕಿ ಗ್ರಾಮದಲ್ಲಿ ಹೊಸದಾಗಿ ಮಂಜೂರಾದ ರಸ್ತೆ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿ ಗಳು ಬೇಲಿ ಹಾಕಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಳಸ - ಇಡಕಣಿ ಮಾರ್ಗದ ನಾಗಲಮಕ್ಕಿ ಗ್ರಾಮದಲ್ಲಿ ಹೊಸದಾಗಿ ಮಂಜೂರಾದ ರಸ್ತೆ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿ ಗಳು ಬೇಲಿ ಹಾಕಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ರಸ್ತೆ ಕಾಣದ ಈ ಹಳ್ಳಿಗೆ ಕೊನೆಗೂ ಸರಕಾರದಿಂದ ರಸ್ತೆ ಮಂಜೂರಾಗಿತ್ತು. ಹಲವಾರು ವರ್ಷಗಳ ಬೇಡಿಕೆ ಬಳಿಕ ರಸ್ತೆ ನಿರ್ಮಾಣ ಕಾರ್ಯ ಆರಂಭವಾದರೂ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಡೆ ಹಿಡಿದಿದ್ದಾರೆ. ಸುಮಾರು 200 ಮೀಟರ್ ದೂರದವರೆಗೆ ರಸ್ತೆ ಮಧ್ಯೆ ಬೇಲಿ ಹಾಕಲಾಗಿದ್ದು, ಇದರಿಂದ ವಾಹನ ಓಡಿಸಲು ತೊಂದರೆಯಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ.

ಈ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ ಹಾಗಾಗಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಆದರೆ, ಗ್ರಾಮಸ್ಥರು ಈ ದಾರಿಯನ್ನು ವರ್ಷಗಳಿಂದಲೇ ಬಳಸುತ್ತಿದ್ದು, ಹೊಸ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅರಣ್ಯ ಇಲಾಖೆ ವಿನಾಕಾರಣ ಅಡ್ಡಿಪಡಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ರಸ್ತೆ ನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಪರಿಸ್ಥಿತಿಯಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಮಧ್ಯೆ ಬೇಲಿ ಹಾಕಿರುವುದರಿಂದ ಟಾರ್ ಹಾಕೋದು ಹೇಗೆ ಎಂಬ ಪ್ರಶ್ನೆ ಎದುರಾಗಿದ್ದು, ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿ ಸಲಾಗಿದೆ.

ಹಳ್ಳಿಯ ಜನತೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

15 ಕೆಸಿಕೆಎಂ 4ಕಳಸ - ಇಡಕಣಿ ಮಾರ್ಗದ ನಾಗಲಮಕ್ಕಿ ಗ್ರಾಮದಲ್ಲಿ ಹೊಸದಾಗಿ ಮಂಜೂರಾದ ರಸ್ತೆ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಲಿ ಹಾಕಿರುವುದು.