ಧಾರವಾಡ: ವನ್ಯ ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಉಪಕ್ರಮ

| Published : Apr 04 2024, 01:09 AM IST / Updated: Apr 04 2024, 09:40 AM IST

ಸಾರಾಂಶ

ವನ್ಯ ಮೃಗಗಳು ಮನುಷ್ಯ ವಸತಿ ಪ್ರದೇಶಗಳಿಗೆ ನುಗ್ಗಿ ಹಾನಿ ಮಾಡದಂತೆ ತಡೆಯಲು ಇದೀಗ ಅರಣ್ಯ ಇಲಾಖೆಯು ಹೊಸ ಉಪಕ್ರಮವೊಂದನ್ನು ಕೈಗೊಂಡಿದೆ.

ಬಸವರಾಜ ಹಿರೇಮಠ

ಧಾರವಾಡ:  ವನ್ಯ ಮೃಗಗಳು ಮನುಷ್ಯ ವಸತಿ ಪ್ರದೇಶಗಳಿಗೆ ನುಗ್ಗಿ ಹಾನಿ ಮಾಡದಂತೆ ತಡೆಯಲು ಇದೀಗ ಅರಣ್ಯ ಇಲಾಖೆಯು ಹೊಸ ಉಪಕ್ರಮವೊಂದನ್ನು ಕೈಗೊಂಡಿದೆ. ಬೇಸಿಗೆಯಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅರಣ್ಯ ಪ್ರದೇಶಗಳಲ್ಲಿ ಕೃತಕ ಹೊಂಡ ನಿರ್ಮಿಸಿ, ಅವುಗಳಿಗೆ ಟ್ಯಾಂಕರ್‌ ಮೂಲಕ ನೀರು ತುಂಬುವ ಕೈಂಕರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದ್ದು, ಈ ಹೊಂಡಗಳು ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತಿವೆ.

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯನಗರ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿರುವ ವನ್ಯ ಪ್ರಾಣಿ-ಪಕ್ಷಿಗಳು ನೀರಿನ ಕೊರತೆಯಿಂದಾಗಿ ನೀರನ್ನು ಹುಡುಕಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಈ ಜಿಲ್ಲೆಗಳು ತೀವ್ರ ಬರಗಾಲದಿಂದ ಬಳಲುತ್ತಿದ್ದು, ವನ್ಯಮೃಗಗಳ ಓಡಾಟ ಮತ್ತು ಸಾಕು ಪ್ರಾಣಿಗಳ ಮೇಲೆ ಅವುಗಳ ದಾಳಿ ಜನರನ್ನು ಕಂಗೆಡಿಸಿವೆ.

ಇತ್ತೀಚೆಗೆ ಧಾರವಾಡ ಸಮೀಪದ ಮನಸೂರು ಗ್ರಾಮದ ಸುತ್ತಮುತ್ತ ಚಿರತೆಯೊಂದು ಓಡಾಡುತ್ತಿದ್ದು ಈ ವರೆಗೆ ನಾಲ್ಕು ಹಸು ಕೊಂದು ಹಾಕಿದೆ. ಇದರಿಂದ ಜನರು ಭೀತಿಗೊಂಡಿದ್ದು, ಮಹಿಳೆಯರು, ಮಕ್ಕಳು ಓಡಾಡುವುದು ದುಸ್ತರವಾಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಅವಿರತ ಪ್ರಯತ್ನ ನಡೆಸಿದ್ದು, ಇನ್ನೂ ಯಶಸ್ವಿಯಾಗಿಲ್ಲ ಎಂಬುದೇ ಬೇಸರದ ಸಂಗತಿ.

ಎಷ್ಟು ಹೊಂಡಗಳು:  ಕಲಘಟಗಿ ವಲಯದಲ್ಲಿ 16, ಧಾರವಾಡದಲ್ಲಿ ಎಂಟು ಮತ್ತು ಹುಬ್ಬಳ್ಳಿಯಲ್ಲಿ ನಾಲ್ಕು ಹೊಂಡಗಳನ್ನು ಇಲಾಖೆ ನಿರ್ಮಿಸಿ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ವಿಜಯನಗರ ಜಿಲ್ಲೆಯ ದರೋಜಿ ಮತ್ತು ಗುಡೇಕೋಟೆ ಕರಡಿ ಧಾಮಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ದರೋಜಿಯಲ್ಲಿ 30 ನೀರಿನ ಟ್ಯಾಂಕ್‌ ಮತ್ತು ಗುಡೇಕೋಟೆಯಲ್ಲಿ 23 ಟ್ಯಾಂಕ್‌ ನಿರ್ಮಿಸಿದ್ದು, ಅವುಗಳಿಗೆ ನಿಯಮಿತವಾಗಿ ಹಾಗೂ ವಾರಕ್ಕೊಮ್ಮೆ ನೀರು ತುಂಬಿಸಲಾಗುತ್ತಿದೆ ಎಂದು ಧಾರವಾಡ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಶಿವಶಂಕರ ಕೌರಿ ಮಾಹಿತಿ ನೀಡಿದರು.

ಅದೇ ರೀತಿ ಹಂಪಿ ಅರಣ್ಯ ಪ್ರದೇಶದ ನಾಲ್ಕು ವಲಯಗಳಲ್ಲಿ ಕೃತಕ ಹೊಂಡ ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರಿನ ಸೌಕರ್ಯ ಒದಗಿಸಲಾಗಿದೆ. ಗದಗ ಜಿಲ್ಲೆ ಕಪ್ಪತ್ತಗುಡ್ಡದ ಅರಣ್ಯ ವಲಯದಲ್ಲಿ ಬಹುತೇಕ ಜಲಮೂಲಗಳು ಬತ್ತಿವೆ. ಮುಂಡರಗಿ ತಾಲೂಕಿನ ಅರಣ್ಯ ವಲಯದಲ್ಲಿ 30 ಕೃತಕ ಹೊಂಡ ನಿರ್ಮಿಸಿ 15 ದಿನಗಳಿಗೊಮ್ಮೆ ನೀರು ತುಂಬಿಸಲಾಗುತ್ತಿದೆ ಎಂದು ಹಂಪಿ ಭಾಗದ ಉಪ ಸಂರಕ್ಷಣಾಧಿಕಾರಿ ಅರ್ಸಲೇನ್‌ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಶಿರಸಿ ಅರಣ್ಯ ವಲಯದಲ್ಲಿ ಕಾಂಕ್ರೀಟ್‌ ಹೊಂಡ ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಮುಂಡಗೋಡ ಮತ್ತು ಕಾತೂರ ಅರಣ್ಯ ವಲಯದಲ್ಲಿ ಐದು ಹೊಂಡ ನಿರ್ಮಿಸಲಾಗಿದ್ದು, ಶಿರಸಿಯಲ್ಲಿ ನಾಲ್ಕು ಹೊಂಡಗಳಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ಜಿಂಕೆ, ನರಿ, ತೋಳ ಮುಂತಾದ ಪ್ರಾಣಿಗಳಿದ್ದು, ಅಲ್ಲಿನ ಕೆರೆಗಳ ಪೈಕಿ ಬಹುತೇಕ ಬತ್ತಿ ಹೋಗಿವೆ. ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಮಾಹಿತಿ ನೀಡಿದರು.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಆಹಾರ ಮತ್ತು ನೀರಿಗಾಗಿ ಕಾಡು ಪ್ರಾಣಿಗಳು ನಾಡಿನೆಡೆಗೆ ಬರುತ್ತಿದ್ದು, ಅವುಗಳ ಪ್ರದೇಶದಲ್ಲಿಯೇ ಅವುಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಮಾಡಿರುವ ಕೃತಕ ಹೊಂಡಗಳು ಪ್ರಾಣಿ ಪಕ್ಷಿಗಳಿಗೆ ಮರಭೂಮಿಯಲ್ಲಿ ಓಯಾಸಿಸ್‌ ಸಿಕ್ಕಂತೆಯೇ ಸರಿ.