ಸಾರಾಂಶ
ಹಬ್ಬಗಳ ವಿಶೇಷ ದಿನಗಳಲ್ಲಿ ಮಾತ್ರ ಭಕ್ತರಿಗೆ ಅವಕಾಶ । ಅರಣ್ಯ ವಿಹಾರ ಪೋರ್ಟಲ್ ಮೂಲಕ ನೋಂದಣಿ
ಕನ್ನಡಪ್ರಭ ವಾರ್ತೆ ಹನೂರುಶಿವರಾತ್ರಿ, ಯುಗಾದಿ, ಮಹಾಲಯ ಅಮಾವಾಸ್ಯೆ, ದೀಪಾವಳಿ, ಕಾರ್ತಿಕ ಮಾಸ ಸೇರಿದಂತೆ ಹಬ್ಬದ ವಿಶೇಷ ದಿನಗಳಲ್ಲಿ ಭಕ್ತರು ನಾಗಮಲೆಗೆ ಹೋಗಿ ಬರಲು ಅರಣ್ಯ ಇಲಾಖೆ ಅನುಮತಿ ನೀಡಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ನಾಗಮಲೆಗೆ ಪ್ರತಿ ದಿನ 200 ಮಂದಿ ಅರಣ್ಯ ಇಲಾಖೆಯ ಪೋರ್ಟಲ್‌ನ ಅರಣ್ಯ ವಿಹಾರ ಮೂಲಕ ನೋಂದಾಯಿಸಿಕೊಂಡು ಚಾರಣ ಕೈಗೊಳ್ಳಲು ಈಗಾಗಲೇ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿಕೊಡಲಾಗಿದೆ.ಆದರೆ, ಸಾಲೂರು ಮಠದ ಸಂತ ಮಲ್ಲಿಕಾರ್ಜುನ ಸ್ವಾಮಿ ಮನವಿ ಮೇರೆಗೆ ಯುಗಾದಿ, ಶಿವರಾತ್ರಿ, ಮಹಾಲಯ ಅಮಾವಾಸ್ಯೆ, ದೀಪಾವಳಿ, ಜಾತ್ರಾ ಮಹೋತ್ಸವ ನವರಾತ್ರಿ ದಿನಗಳಲ್ಲಿ ಆಯುಧಪೂಜೆ, ವಿಜಯದಶಮಿ, ಕಾರ್ತಿಕ ಸೋಮವಾರದ ದಿನಗಳು ಸೇರಿದಂತೆ ಇತರೆ ವಿಶೇಷ ದಿನಗಳಲ್ಲಿ ಮಾತ್ರ 200ಕ್ಕಿಂತ ಹೆಚ್ಚಿನ ಭಕ್ತರಿಗೆ ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಾಗದಂತೆ ಹಾಗೂ ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವುದೇ ಹಾನಿ ಉಂಟು ಮಾಡದ ಷರತ್ತಿನೊಂದಿಗೆ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯ ಒಳಗೆ ನಾಗಮಲೆಗೆ ಹೋಗಿ ಸಂಜೆ 6 ಗಂಟೆಯ ಒಳಗೆ ವಾಪಸ್ಸು ಬರಲು ಅನಮತಿ ನೀಡಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶಿಸಿದ್ದಾರೆ.
ಪ್ರವೇಶ ನಿಷೇಧಕ್ಕೆ ಕಾರಣ:ಮಲೆ ಮಾದೇಶ್ವರ ಬೆಟ್ಟದಿಂದ ಇಂಡಿಗನತ್ತ ಗ್ರಾಮದ ನಿವಾಸಿಗಳು 200ಕ್ಕೂ ಹೆಚ್ಚು ಜೀಪ್‌ಗಳನ್ನು ಇಟ್ಟುಕೊಂಡು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರುಳುವ ಭಕ್ತಾದಿಗಳನ್ನು ಇಂಡಿಗನತ್ತ ಗ್ರಾಮದವರೆಗೆ ಕರೆದುಕೊಂಡು ಹೋಗಿ ಮತ್ತೆ ವಾಪಸ್ ಕರೆತಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಡಲಾಗುತ್ತಿತ್ತು. ಚಾರಣಕ್ಕೆ ನಿಷೇಧ ಎಂಬ ಅರಣ್ಯ ಇಲಾಖೆ ಕಾನೂನಿನ ಪ್ರಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ವೇಳೆಯಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣ ಪ್ರವೇಶ ನಿಷೇಧಕ್ಕೆ ಕಾರಣವಾಗಿತ್ತು. ಹೀಗಾಗಿ ಮತ್ತೆ ನಾಗಮಲೆಗೆ ಭಕ್ತರನ್ನು ಆನ್ಲೈನ್ ಮೂಲಕ ಕರೆದೊಯ್ಯಲು ಅರಣ್ಯ ಇಲಾಖೆ ಅನುಮತಿ ನೀಡಿರುವುದು ಇಂಡಿಗನತ್ತ ಗ್ರಾಮದ ನಿವಾಸಿಗಳಿಗೆ ನಿಟ್ಟುಸಿರು ಬಿಡುವಂತಾಗಿದೆ.