ಅರಣ್ಯ ಇಲಾಖೆ, ಸಾರ್ವಜನಿಕರು ಒಟ್ಟಾಗಿ ಹಸಿರು ಬೆಳೆಸಲಿ: ಶಾಸಕ ಭೀಮಣ್ಣ ನಾಯ್ಕ

| Published : Mar 15 2024, 01:17 AM IST

ಅರಣ್ಯ ಇಲಾಖೆ, ಸಾರ್ವಜನಿಕರು ಒಟ್ಟಾಗಿ ಹಸಿರು ಬೆಳೆಸಲಿ: ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಮರಗಳಿದ್ದರೆ ಮಳೆ. ಮಳೆ ಕಡಿಮೆಯಾದರೆ ರೈತಾಪಿ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಒಂದಾಗಿ ಅರಣ್ಯ ಬೆಳೆಸಬೇಕು.

ಸಿದ್ದಾಪುರ: ಅರಣ್ಯ ಇಲಾಖೆ ಹಾಗೂ ಶಿರೂರು- ಬಾಳಗೋಡಿನ ಗ್ರಾಮ ಅರಣ್ಯ ಸಮಿತಿಗಳ ಸಹಯೋಗದಲ್ಲಿ ನಿರ್ಮಿಸಲಾದ ಪರಿಸರ ಭವನವನ್ನು ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ, ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ವಿತರಿಸಿದರು.

ನಂತರ ಮಾತನಾಡಿದ ಭೀಮಣ್ಣ ನಾಯ್ಕ, ಮರಗಳಿದ್ದರೆ ಮಳೆ. ಮಳೆ ಕಡಿಮೆಯಾದರೆ ರೈತಾಪಿ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಒಂದಾಗಿ ಅರಣ್ಯ ಬೆಳೆಸಬೇಕು. ಅರಣ್ಯ ಬೆಳೆಸುವ ಆಸಕ್ತರು ಮುಂದೆ ಬಂದರೆ ಅವಕಾಶ ಕಲ್ಪಿಸಬೇಕು. ಶೇ. ೮೨ರಷ್ಟು ಅರಣ್ಯವನ್ನು ಹೊಂದಿರುವ ನಮ್ಮ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಜನತೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕು. ಕೃಷಿಕರು ಕೃಷಿಯ ಜತೆಗೆ ಜೇನು ಸಾಕಾಣಿಕೆ ಆರಂಭಿಸಬೇಕು ಎಂದರು.

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳು ಸಕ್ರಿಯವಾಗಿರುವಷ್ಟು ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಶಿರಸಿ- ಸಿದ್ದಾಪುರ ತಾಲೂಕಿನ ಗ್ರಾಮ ಅರಣ್ಯ ಸಮಿತಿಗಳಿಗೆ ಹೆಚ್ಚಿನ ಲಾಭಾಂಶ ನೀಡಲಾಗಿದೆ. ಇಲ್ಲಿನ ಸಮಿತಿಗಳು ಅರಣ್ಯ ಬೆಳೆಸುವ ಕುರಿತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಜನರಿಗೆ ಅರಣ್ಯ ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದರು.

ಶಿರೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವೆಂಕಟರಮಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಸದಸ್ಯರಾದ ದತ್ತಾತ್ರೇಯ ಭಟ್, ಸರಸ್ವತಿ ಹಸ್ಲರ್, ಎಸಿಎಫ್‌ ಪ್ರವೀಣ ಬಸ್ರೂರ, ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ, ಪ್ರಮುಖರಾದ ಕೆ.ಜಿ. ನಾಗರಾಜ, ವಿ.ಎನ್. ನಾಯ್ಕ, ವಸಂತ ನಾಯ್ಕ ಮುಂತಾದವರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ.ಆರ್. ಪ್ರಾಸ್ತಾವಿಕ ಮಾತನಾಡಿದರು. ಕ್ಯಾದಗಿ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ ನಾಯ್ಕ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ವಂದಿಸಿದರು.