ಸಾರಾಂಶ
ಯಲ್ಲಾಪುರ: ಸಾಗುವಳಿ ಮಾಡುತ್ತಿದ್ದೇವೆ, ಅರ್ಜಿ ಕೊಟ್ಟಿದ್ದೇವೆ, ಜಿಪಿಎಸ್ ಆಗಿಲ್ಲ. ಅರಣ್ಯಹಕ್ಕು ಕಾಯಿದೆ ಜಾರಿಗೆ ಬಂದಿದೆ. ಅರಣ್ಯ ಸಿಬ್ಬಂದಿ ದೌರ್ಜನ್ಯ, ಕಿರುಕುಳ ತಪ್ಪಿಲ್ಲ. ಹಕ್ಕು ಪತ್ರ ನೀಡಿದ್ದಾರೆ. ಪಹಣಿ ಪತ್ರದಲ್ಲಿ ಹೆಸರು ದಾಖಲಾಗಿಲ್ಲ. ಬುಡಕಟ್ಟು ಜನಾಂಗದ ಭೂಮಿ ಹಕ್ಕುದಾರರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಹೀಗೆ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾದ ಸಂದರ್ಭದಲ್ಲಿ ಅರಣ್ಯವಾಸಿಗಳು ವೇದಿಕೆಯಲ್ಲಿದ್ದ ಮುಖಂಡರ ಬಳಿ ಅಳಲು ತೋಡಿಕೊಂಡರು.
ತಾಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಾಲಯದ ಸಂಭಾಗಣದಲ್ಲಿ ಮಾ.೧೦ರಂದು ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾದಲ್ಲಿ ಈ ಧ್ವನಿಗಳು ವ್ಯಕ್ತವಾದವು.ಕಾನೂನು ಜಾರಿಗೆ ಬಂದು ೧೮ ವರ್ಷಗಳಾದರೂ ಜಿಲ್ಲೆಯಲ್ಲಿ ಶೇ.೧೦ರಷ್ಟು ಅರಣ್ಯವಾಸಿಗಳು ಮಂಜೂರಿಗೆ ಅರ್ಜಿ ನೀಡಿಲ್ಲ. ಶೇ.೭೨ರಷ್ಟು ಅರಣ್ಯವಾಸಿಗಳ ಜಿಪಿಎಸ್ ಅಸಮರ್ಪಕವಾಗಿದೆ. ಜಿಲ್ಲೆಯಲ್ಲಿ ೮೭,೭೫೭ ಅರ್ಜಿ ಸಲ್ಲಿಸಿದ್ದಲ್ಲಿ ಪ್ರಥಮ ಹಂತದಲ್ಲಿ ೬೯,೭೩೩ ಅರ್ಜಿಗಳು (ಶೇ.73) ತಿರಸ್ಕಾರವಾಗಿವೆ. ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ದೊರಕಿರುವುದು ೨,೮೫೨ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ವಿವರ ನೀಡಿದರು.
ಅರಣ್ಯವಾಸಿಗಳ ಅರಣ್ಯ ಭೂಮಿ ಮಂಜೂರಿಗೆ ಕಾನೂನು ತಿಳಿವಳಿಕೆ ಅವಶ್ಯ. ಕಾನೂನು ಜ್ಞಾನವನ್ನು ವೃದ್ಧಿಸುವ ಕಾರ್ಯ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ಮಾಡುತ್ತಿದೆ. ಕಾನೂನು ಜ್ಞಾನದ ಕೊರತೆಯು ಭೂಮಿ ಹಕ್ಕಿನಿಂದ ವಂಚಿತಕ್ಕೆ ಕಾರಣರಾಗದಿರಿ ಎಂದರು.ತಾಲೂಕು ಅಧ್ಯಕ್ಷ ಭೀಮಶಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಮರಾಠಿ ಸ್ವಾಗತಿಸಿ, ನಿರ್ವಹಿಸಿದರು. ಭಾಸ್ಕರ ಗೌಡ ವಂದಿಸಿದರು. ಗ್ರೀನ್ ಕಾರ್ಡ ಪ್ರಮುಖರಾದ ವಿನೋದ ತಳಕೇರಿ, ಚಂದ್ರು ಪೂಜಾರಿ, ಬೀರಪ್ಪ ಬಿಳ್ಕಿ, ಕೃಷ್ಣ ನಾಯರ್, ನರಸಿಂಹ ನಾಯ್ಕ ಮುಂತಾದವರು ಮಾತನಾಡಿದರು.
ಮಂಚಿಕೇರಿಯಲ್ಲಿ ಬೃಹತ ಅರಣ್ಯವಾಸಿಗಳ ಜಾಗೃತಾ ಜಾಥಾ ನಡೆಯಿತು.