ಸಾರಾಂಶ
ವರಮಹಾಲಕ್ಷ್ಮೀ ಹಬ್ಬದಂದೆ ತಾಲೂಕಿನ ಯಸಳೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಯಸಳೂರು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತುವರಿ ತೆರವು ಮಾಡಿದ್ದು ಇದು ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ. ಯಸಳೂರು ಹೋಬಳಿಯ ಕೊತ್ತನಹಳ್ಳಿ ಅಕೇಷಿಯಾ ನೆಡುತೋಪಿನಲ್ಲಿ ಎಡಕೇರಿ ಗ್ರಾಮದ ವೈ.ಟಿ ಪಾರ್ವತಮ್ಮ ಕೋ ಮಂಜೇಗೌಡ ಮತ್ತು ವೈ.ಎಂ ನಾಗರಾಜು ಬಿನ್ ಮಂಜೇಗೌಡ ಎಂಬುವರು ಸುಮಾರು ೩೦ ಎಕರೆ ಅರಣ್ಯ ಪ್ರದೇಶದಲ್ಲಿ ೧೨ ಎಕರೆಗೂ ಹೆಚ್ಚು ಜಾಗದಲ್ಲಿ ಬೇಲಿ ಮಾಡಿ ಒತ್ತುವರಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ೧೧ ಗಂಟೆಯ ವೇಳೆಗ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒತ್ತುವರಿ ತೆರವುಗೊಳಿಸಿರುತ್ತಾರೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ವರಮಹಾಲಕ್ಷ್ಮೀ ಹಬ್ಬದಂದೆ ತಾಲೂಕಿನ ಯಸಳೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಯಸಳೂರು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತುವರಿ ತೆರವು ಮಾಡಿದ್ದು ಇದು ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ.ತಾಲೂಕಿನ ಸಹಾಯಕ ಅರಣ್ಯಾಧಿಕಾರಿ ಮಧುಸೂದನ್ ಮಾರ್ಗದರ್ಶನದಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿ ಎಸ್.ಆರ್. ಕೃಷ್ಣ ನೇತೃತ್ವದಲ್ಲಿ ತಾಲೂಕಿನ ಯಸಳೂರು ಹೋಬಳಿಯ ಕೊತ್ತನಹಳ್ಳಿ ಅಕೇಷಿಯಾ ನೆಡುತೋಪಿನಲ್ಲಿ ಎಡಕೇರಿ ಗ್ರಾಮದ ವೈ.ಟಿ ಪಾರ್ವತಮ್ಮ ಕೋ ಮಂಜೇಗೌಡ ಮತ್ತು ವೈ.ಎಂ ನಾಗರಾಜು ಬಿನ್ ಮಂಜೇಗೌಡ ಎಂಬುವರು ಸುಮಾರು ೩೦ ಎಕರೆ ಅರಣ್ಯ ಪ್ರದೇಶದಲ್ಲಿ ೧೨ ಎಕರೆಗೂ ಹೆಚ್ಚು ಜಾಗದಲ್ಲಿ ಬೇಲಿ ಮಾಡಿ ಒತ್ತುವರಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ೧೧ ಗಂಟೆಯ ವೇಳೆಗ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒತ್ತುವರಿ ತೆರವುಗೊಳಿಸಿರುತ್ತಾರೆ.
ಕಳೆದ ಕೆಲವು ವಾರಗಳ ಹಿಂದೆ ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣರವರು ಮರಡಿಕೆರೆ ಗ್ರಾಮದ ಸರ್ವೆ ನಂ ೩೬೧/೧ರಲ್ಲಿ ಪ್ರಿಯಾ ಎಂಬ ದಲಿತ ಮಹಿಳೆ ಅರಣ್ಯ ಪ್ರದೇಶದಲ್ಲಿ ಮನೆಯನ್ನು ಕಟ್ಟಿದ್ದಾರೆ ಎಂಬ ಆರೋಪದ ಮೇಲೆ ಮನೆಯನ್ನು ತೆರವುಗೊಳಿಸಿದ್ದರು. ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ದಲಿತ ಸಂಘಟನೆಗಳು ವಲಯ ಅರಣ್ಯಾಧಿಕಾರಿ ಕೃಷ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು ಅಲ್ಲದೆ ಶಾಸಕ ಸಿಮೆಂಟ್ ಮಂಜು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.