ಮೊಸಳೆ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ

| Published : Nov 01 2024, 12:31 AM IST / Updated: Nov 01 2024, 12:32 AM IST

ಸಾರಾಂಶ

ಕಾಗವಾಡ ತಾಕೂಕಿನ ಐನಾಪುರ ಪಟ್ಟಣದ ಹೊರವಲಯದಲ್ಲಿರುವ ಬೃಹತ್ ಕಲ್ಲು ಕ್ವಾರಿ( ಖನಿ)ಯ ನೀರಿನಲ್ಲಿರುವ ಎರಡು ಮೊಸಳೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಅರಣ್ಯಾಧಿಕಾರಿ ರಾಖೇಶ ಅರ್ಜುನವಾಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ತಾಕೂಕಿನ ಐನಾಪುರ ಪಟ್ಟಣದ ಹೊರವಲಯದಲ್ಲಿರುವ ಬೃಹತ್ ಕಲ್ಲು ಕ್ವಾರಿ( ಖನಿ)ಯ ನೀರಿನಲ್ಲಿರುವ ಎರಡು ಮೊಸಳೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಅರಣ್ಯಾಧಿಕಾರಿ ರಾಖೇಶ ಅರ್ಜುನವಾಡ ತಿಳಿಸಿದ್ದಾರೆ.

ಗುರುವಾರ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ಅವರು, ಈ ಕಲ್ಲು ಕ್ವಾರಿಯಲ್ಲಿ ಸಂಗ್ರಹಗೊಂಡಿರುವ ನೀರಿನಲ್ಲಿ ಮೊಸೆಳಗಳಿರುವುದನ್ನು ಕಂಡು ಜನ ಭಯಭೀತರಾಗಿದ್ದಾರೆ. ಯಾವುದೇ ಅನಾಹುತವಾಗದಂತೆ ಮುನ್ನೆಚ್ಚೆರಿಕೆ ಕ್ರಮ ವಹಿಸಲಾಗಿದೆ. ಶೀಘ್ರವೇ ಮೊಸಳೆಗಳನ್ನು ಸೆರೆ ಹಿಡಿಯಲಾಗುವುದು ಎಂದು ಹೇಳಿದ್ದಾರೆ.

ಈ ಬೃಹತ್ ಕಲ್ಲು ಖನಿಯಲ್ಲಿ ಸುಮಾರು 80 ಅಡಿ ಆಳವಿದ್ದು, ಮೊಸಳೆಗಳನ್ನು ಹುಡುಕುವುದು ಕಷ್ಟದ ಕೆಲಸ. ಪ್ರತಿದಿನವೂ ಮಾಂಸದ ತುಂಡುಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದರೂ ಕೂಡ ಮೊಸಳೆ ಹೊರಕ್ಕೆ ಬರುತ್ತಿಲ್ಲ. ಕಾರ್ಯಾಚರಣೆ ವೀಕ್ಷಿಸಲು ನೂರಾರು ಜನ ಸೇರುತ್ತಿದ್ದಾರೆ. ಜನರ ಕೂಗಾಟ, ಕೇಕೆಗೆ ಮೊಸಳೆಗಳು ಹೊರ ಬರದೇ ನೀರಿನಲ್ಲಿಯೇ ಅವಿತುಕೊಳ್ಳುತ್ತಿವೆ. ಜನರ ಸಪ್ಪಳ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಜನತೆ ಸಹಕಾರ ನೀಡವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಕಲ್ಲು ಕ್ವಾರಿಯಲ್ಲಿ ಎರಡು ಮೊಸಳೆಗಳಿವೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಎಂತಹದೇ ಪರಿಸ್ಥಿತಿಯಲ್ಲಿ ಮೊಸಳೆಗಳನ್ನು ಹಿಡಿಯಲಾಗುವುದು. ಜನತೆ ಆತಂಕಪಡುವ ಅಗತ್ಯವಿಲ್ಲ. ಮೊಸಳೆ ಕಾರ್ಯಾಚರಣೆ ಯಶಸ್ವಿಯಾಗುವವರೆಗೂ ನೀರಿನಲ್ಲಿ ಯಾರೂ ಇಳಿಯಬೇಡಿ. ಜಾನುವಾರುಗಳನ್ನು ಕೂಡ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ.