ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ವಿವಿಧ ಚಟುವಟಿಕೆ ನಡೆಸುವುದರಿಂದ ಅಲ್ಲಿಯ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಧಾರವಾಡ:

ನ್ಯಾಯಾಂಗ ಹಾಗೂ ಅರಣ್ಯ ಇಲಾಖೆಗೆ ಹತ್ತಿರದ ಸಂಬಂಧ. ಅರಣ್ಯ ಸಂರಕ್ಷಣೆ ಸರ್ವೋಚ್ಚ ನ್ಯಾಯಾಲಯ ಹಾಗೂ ನ್ಯಾಯಾಂಗ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಎನ್‌.ವಿ. ವಿಜಯ ಹೇಳಿದರು.

ಇಲ್ಲಿಯ ಕೆ.ಸಿ. ಪಾರ್ಕ್‌ ಹತ್ತಿರದ ಅರಣ್ಯ ಸಂಕಿರ್ಣದಲ್ಲಿ ಅರಣ್ಯ ಇಲಾಖೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ವಿಚಾರವಾಗಿ ನ್ಯಾಯಾಂಗ ಇಲಾಖೆಯಿಂದ ಹಲವು ತೀರ್ಪುಗಳನ್ನು ನೀಡಲಾಗಿದೆ ಎಂದರು.

ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ವಿವಿಧ ಚಟುವಟಿಕೆ ನಡೆಸುವುದರಿಂದ ಅಲ್ಲಿಯ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಸಣ್ಣ ಬೆಂಕಿಯ ಕಿಡಿಯೊಂದು ಹುಲ್ಲಿಗೆ ತಗುಲಿದರೂ ಇಡೀ ಅರಣ್ಯ ಪ್ರದೇಶವನ್ನೇ ನಾಶಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ಬಂಡೀಪುರ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನಿಂದ ಸಾಕಷ್ಟು ತೊಂದರೆ ಉಂಟಾಗಿರುವ ಘಟನೆಗಳನ್ನು ನೋಡಿದ್ದೇವೆ. ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ಪ್ರಾಣಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ರಕ್ಷಕರು ಸಾಕಷ್ಟು ತೊಂದರೆ ಎದುರಿಸುತ್ತಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಕೆಲವರು ತಮ್ಮ ಜೀವವನ್ನೂ ಕಳೆದುಕೊಂಡಿರುವ ಘಟನೆಗಳಿವೆ. ಹೀಗಾಗಿ ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ, ಮಾತನಾಡಿ, ಕರ್ನಾಟಕದಲ್ಲಿ ಕಳೆದ 6 ದಶಕಗಳಲ್ಲಿ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ಸುಮಾರು 65 ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲೇ 17 ಮಂದಿ ಮೃತಪಟ್ಟಿದ್ದಾರೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಿ. ಶ್ರೀನಿವಾಸ್ ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆನೆ, ಹುಲಿ ಹಾಗೂ ಚಿರತೆಗಳ ದಾಳಿ, ಕಾಡ್ಗಿಚ್ಚು ನಂದಿಸುವ ಕಾರ್ಯ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಸಂದರ್ಭದಲ್ಲಿಯೂ ಅನೇಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣ ತ್ಯಾಗ ಮಾಡಿದ್ದಾರೆ. ಧಾರವಾಡದ ಎ. ಪೂಜಾರಿ ಹಾಗೂ ಗದಗ ಜಿಲ್ಲೆಯ ಎಂ.ಬಿ. ಶಿರಹಟ್ಟಿ ಕೂಡ ಪರಿಸರ ಸಂರಕ್ಷಣೆಗಾಗಿ ಪ್ರಾಣ ಕಳೆದುಕೊಂಡವರಲ್ಲಿ ಸೇರಿದ್ದಾರೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾತನಾಡಿ, ನಾವೇ ಶ್ರೇಷ್ಠ ಜೀವಿಗಳು ಎಂಬ ಅಹಂಕಾರವಿದ್ದು, ಕೋವಿಡ್‌ನಂತಹ ಸಣ್ಣ ವೈರಸ್ ಕೂಡ ಮೂರು-ನಾಲ್ಕು ವರ್ಷಗಳ ಕಾಲ ಇಡೀ ಜಗತ್ತಿಗೆ ಸಂಕಷ್ಟ ತಂದಿತು. ಇದರಿಂದ ಪ್ರಕೃತಿ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಅರಿಯಬೇಕು. ನದಿಗಳಿಗೆ ಆಣೆಕಟ್ಟು ನಿರ್ಮಿಸಿ ನೀರನ್ನು ನಿಯಂತ್ರಿಸಬಹುದು ಎಂಬ ದರ್ಪವೂ ಮನುಷ್ಯರಲ್ಲಿದೆ. ಆದರೆ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮನುಷ್ಯ ಪ್ರಕೃತಿಯ ಮುಂದೆ ಎಷ್ಟು ಸಣ್ಣವನು ಎಂಬುದು ಅರಿವಾಗುತ್ತದೆ. ಆದ್ದರಿಂದ ಪ್ರಕೃತಿ ಬಗ್ಗೆ ಅಹಂಕಾರ ಇರಬಾರದು. ನಮಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ದೊರೆತಿದೆ. ಅದೇ ರೀತಿಯ ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೂ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಅರಣ್ಯ ಹುತಾತ್ಮರಿಗೆ ಪುಷ್ಪ ನಮನ ಗೌರವಂದನೆ ಸಲ್ಲಿಸಲಾಯಿತು. ಅರಣ್ಯ ಅಧಿಕಾರಿಗಳಾದ ಸುನಿತಾ ನಿಂಬರಗಿ, ಸಂಜಯ್ ಗುಪ್ತಾ ಮಾತನಾಡಿದರು. ವಿವೇಕ ಟಿ. ಕವರಿ ಸ್ವಾಗತಿಸಿದರು. ಡಾ. ಇಂದು ರವಿಕುಮಾರ ನಿರೂಪಿಸಿದರು. ಅರಣ್ಯ ಪಾಲಕ ಪ್ರಕಾಶ ಕಂಕಣವಾಡಿ ವಂದಿಸಿದರು. ಎಸ್ಪಿ ಗುಂಜನ್ ಆರ್ಯ, ಸಿವಿಲ್‌ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಮತ್ತಿತರರು ಇದ್ದರು.