ಸಾರಾಂಶ
ಬೇಲೂರು: ಜನರಲ್ಲಿ ಭಯ ಹುಟ್ಟಿಸಿ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೆ ಗುಂಪುಗಳಿಂದ ಬೇರ್ಪಟ್ಟಿರುವ ನಾಲ್ಕೈದು ಕಾಡಾನೆಗಳು ಎಂದಿನಂತೆ ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು ತೋಟಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ ಬಿಕ್ಕೋಡು ಹೋಬಳಿ ಹುಸ್ಕೂರು ಗ್ರಾಮದ ರೈತರಾದ ಎಚ್. ಡಿ. ರಮೇಶ್, ಸಿದ್ದೇಗೌಡ, ರಾಜಯ್ಯ ಹಾಗೂ ಶಂಕರಯ್ಯರ ಕಾಫಿ ತೋಟದ ಮೇಲೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು, ಕಾಫಿ, ಬಾಳೆ ಬೆಳೆಗಳನ್ನು ತುಳಿದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ.
ಆಹಾರ ಆರಿಸಿ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಗುಂಪು ಮನೆಯ ಹತ್ತಿರ ಬಂದು ಘೀಳಿಡುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚೆಗೆ ಮತ್ತಾವರ ಗ್ರಾಮದ ಕೂಲಿ ಕಾರ್ಮಿಕ ವಸಂತ ಮೇಲೆ ಒಂಟಿ ಸಲಗ ದಾಳಿ ನಡೆಸಿ ಕೊಂದು ಹಾಕಿದ ಪ್ರಕರಣ ಹಸಿಯಾಗಿರುವಾಗಲೇ ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿರುವ ಕಾಡಾನೆಗಳಿಗೆ ಹೆದರಿ ಕೂಲಿ ಕಾರ್ಮಿಕರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.
ರಾತ್ರಿ ಹಗಲು ಎನ್ನದೆ ಸಂಚರಿಸುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ಶಾಶ್ವತವಾಗಿ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇತ್ತ ಗಮನಹರಿಸಿದ ಅರಣ್ಯ ಇಲಾಖೆ ಅಪಾಯಕಾರಿ ಕಾಡಾನೆಗಳನ್ನು ಸೆರೆ ಹಿಡಿಯದೆ ಕಾಟಾಚಾರದ ಕಾರ್ಯಾಚರಣೆ ನಡೆಸಿ ಸುಮ್ಮನಾಗುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.