ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಅಧಿಕ ರಕ್ತದೊತ್ತಡ, ಮಾದಕ ವ್ಯಸನ, ಧೂಮಪಾನ ಮತ್ತಿತರ ಕಾರಣಗಳಿಂದ ಬರುವ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ) ತಡೆಗೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಬ್ರೈನ್ ಹೆಲ್ತ್ ಕಾರ್ಯಕ್ರಮ ಹಾಗೂ ಅಂತರಗಂಗಾ ವೃದ್ದಾಶ್ರಮದಲ್ಲಿ ವಿಶ್ವ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ)ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವೃದ್ಧರಿಗೆ ಆತ್ಮಸ್ಥೈರ್ಯ ತುಂಬಿ
ವೃದ್ಧರು ಮಕ್ಕಳಂತೆ ಎಂಬುದನ್ನು ಅರಿತು ಅವರ ಆರೋಗ್ಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಕೆಲಸವನ್ನು ಮಾಡಬೇಕು, ಅವರಲ್ಲಿನ ಏಕಾಂಗಿತನ ಹೋಗಲಾಡಿಸಿ ಅವರೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತುಂಬಬೇಕು. ೬೦ ರಿಂದ ೭೦ ವಯಸ್ಸಿನವರಲ್ಲಿ ಮರೆಗುಳಿತನ ಸಮಸ್ಯೆ ಸಾಮಾನ್ಯ, ಇದರಿಂದ ಬಳಲುತ್ತಿರುವವರಲ್ಲಿ ಆಲೋಚನಾ ತೊಂದರೆ, ಮನಸ್ಥಿತಿ ಬದಲಾವನೆ, ನಡವಳಿಕೆ ಕ್ಷೀಣತೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಮರ್ಥ್ಯ ಕುಗ್ಗುತ್ತದೆ ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಮಾನಸಿಕ ಕಾಯಿಲೆಗಳಲ್ಲಿ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ) ಒಂದಾಗಿದ್ದು, ಇದು ಅನುವಂಶಿಕತೆಯಿಂದ, ಪದೇ ಪದೇ ತಲೆಗೆ ಪೆಟ್ಟು, ಮಾದಕ ವ್ಯಸನ, ಅಧಿಕ ಒತ್ತಡದಿಂದ ಬರುತ್ತಿದೆ. ಅಧಿಕ ರಕ್ತದೊತ್ತಡದಿಂದಲೂ ಈ ಕಾಯಿಲೆ ಬರುವುದರಿಂದ ಒತ್ತಡವಿಲ್ಲದ ಜೀವನ ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಹಿಂದೆ ಮಾನಸಿಕ ಕಾಯಿಲೆಗೆ ನಿಮ್ಹಾನ್ಸ್‌ಗೆ ಹೋಗಬೇಕಾಗಿತ್ತು ಆದರೆ ಈಗ ಕರ್ನಾಟಕ ಬ್ರೈನ್ ಹೆಲ್ತ್ ಇನ್ಷಿಯೇಟಿವ್ ನಡಿ ಸ್ಥಳೀಯ ವೈದ್ಯರಿಗೆ ತರಬೇತಿ ನೀಡಿದ್ದು, ಜಿಲ್ಲಾಸ್ಪತ್ರೆಯಲ್ಲೂ ಇದರ ಸೌಲಭ್ಯ ಇದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ, ಮನೋಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ಸ್ಥಳೀಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಅಂತರಗಂಗಾ ಆಶ್ರಮದ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಸ್.ಶಂಕರ್, ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ.ಶರತ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಮತ್ತಿತರರು ಹಾಜರಿದ್ದರು.