ಪ್ರಕೃತಿ ಪರಮಾತ್ಮನ ಸ್ವರೂಪ: ಬ್ರಹ್ಮಾನಂದ ಶ್ರೀ

| Published : Jun 06 2024, 12:32 AM IST

ಸಾರಾಂಶ

ಪ್ರಕೃತಿಯು ಪರಮಾತ್ಮನ ಸ್ವರೂಪವಾಗಿದ್ದು, ಪ್ರಾಚೀನ ಕಾಲದಿಂದಲೂ ಪರಿಸರವನ್ನು ಆರಾಧಿಸುತ್ತ, ಪೂಜಿಸುತ್ತ ಬರಲಾಗುತ್ತಿದೆ.

ಸಿದ್ದಾಪುರ: ಮನುಷ್ಯ ಮತ್ತು ಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರವನ್ನು ಬಳಕೆ ಮಾಡಿಕೊಳ್ಳುವುದರ ಜತೆಗೆ ಪರಿಸರವನ್ನು ಉಳಿಸುವುದಕ್ಕೂ ಮುಂದಾಗಬೇಕು ಎಂದು ಶಿರಳಗಿಯ ಚೈತನ್ಯರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹೊಸೂರಿನ ಶಂಕರಮಠದ ಸಮೀಪ ಇರುವ ಅರಣ್ಯ ಇಲಾಖೆಯ ಆವರಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿ ಪ್ರಕೃತಿಯು ಪರಮಾತ್ಮನ ಸ್ವರೂಪವಾಗಿದ್ದು, ಪ್ರಾಚೀನ ಕಾಲದಿಂದಲೂ ಪರಿಸರವನ್ನು ಆರಾಧಿಸುತ್ತ, ಪೂಜಿಸುತ್ತ ಬರಲಾಗುತ್ತಿದೆ. ಆದರೆ ಇತ್ತೀಚಿನ ದಿನದಲ್ಲಿ ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿರುವುದರಿಂದ ಪರಿಸರದ ನಾಶ ಹೆಚ್ಚುತ್ತಿದೆ. ಇದರಿಂದ ಪ್ರಕೃತಿಯ ಅಸಮತೋಲನ ಉಂಟಾಗುತ್ತಿದೆ. ಮನುಷ್ಯ ಅಹಂಕಾರ ಹಾಗೂ ಮಮಕಾರದಿಂದ ದೂರ ಇರಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪರಿಸರವನ್ನು ಉಳಿಸಬೇಕು ಎಂದರು.

ಸಿದ್ದಾಪುರದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪಾ ಭಟ್ಟ, ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿದರು.

ಎಸಿಎಫ್ ಪ್ರವೀಣ ಬಸ್ರೂರು ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿ ಇದು ಇಲಾಖೆಯಿಂದ ನಿರಂತರವಾಗಿರುವುದಾಗಿದೆ. ಪ್ರಕೃತಿ ಮಾತೆಯ ರಕ್ಷಣೆ ಎಲ್ಲರದ್ದಾಗಿದೆ ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ವಕೀಲ ಆರ್.ಪಿ. ಭಟ್ಟ, ಸಿದ್ದಾಪುರ ಆರ್‌ಎಫ್‌ಒ ಬಸವರಾಜ ಬೋಚೊಳ್ಳಿ, ಕ್ಯಾದಗಿ ಆರ್‌ಎಫ್‌ಒ ಗಿರೀಶ ನಾಯ್ಕ, ಸಿದ್ದಾಪುರದ ಡಿಆರ್‌ಎಫ್‌ಒ ಮಂಜುನಾಥ, ಸಿದ್ದಾಪುರ ಮತ್ತು ಕ್ಯಾದಗಿ ವಲಯದ ಸಿಬ್ಬಂದಿ ಇದ್ದರು.

ಸುಧೀರ್ ಬೇಂಗ್ರೆ ಪ್ರಾರ್ಥನೆ ಹಾಡಿದರು. ಪ್ರವೀಣ ಬಸ್ರೂರು ಕಾರ್ಯಕ್ರಮ ನಿರ್ವಹಿಸಿದರು.